ಬೆಂಗಳೂರು, ಜೂ.14-ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಹಾಗೂ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಕೆಪಿಜೆಪಿ ಪಕ್ಷದ ಶಾಸಕ ಆರ್.ಶಂಕರ್ ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು.
ಆರ್.ಶಂಕರ್ ಮತ್ತು ಎಚ್.ನಾಗೇಶ್ ಅವರು ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಮಧ್ಯಾಹ್ನ 1.15ಕ್ಕೆ ಆರಂಭವಾದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಐದು ನಿಮಿಷಗಳಲ್ಲೇ ಮುಕ್ತಾಯಗೊಂಡಿತು.
ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರುಗಳು ನೂತನ ಸಚಿವರನ್ನು ವೇದಿಕೆಯಲ್ಲಿ ಹೂಗುಚ್ಛ ನೀಡಿ ಅಭಿನಂದಿಸಿದರು. ನಂತರ ನೂತನ ಸಚಿವರು ಗ್ರೂಪ್ ಪೋಟೋಗೆ ಪೋಸ್ ನೀಡಿದರು.
ಎಚ್.ನಾಗೇಶ್ ಅವರು ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಆರ್.ಶಂಕರ್ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಜಮೀರ್ ಅಹಮ್ಮದ್ ಖಾನ್, ಬಂಡೆಪ್ಪ ಕಾಶಂಪುರ್, ಕೃಷ್ಣಭೆರೇಗೌಡ, ಡಿ.ಸಿ.ತಮ್ಮಣ್ಣ ಮತ್ತಿತರರು ಸೇರಿದಂತೆ ಹಲವು ಗಣ್ಯರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಿಜೆಪಿಯವರು ಸಮಾರಂಭದಿಂದ ದೂರ ಉಳಿದಿದ್ದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ಅರಣ್ಯ ಸಚಿವರಾಗಿ ಶಂಕರ್ ಸೇವೆ ಸಲ್ಲಿಸಿದ್ದರು. ಕಳೆದ ಬಾರಿ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಶಂಕರ್ ಮತ್ತು ರಮೇಶ್ ಜಾರಕಿ ಹೊಳಿ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು.
ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಮತ್ತೆ ಆಪರೇಷನ್ ಕಮಲ ನಡೆಯಲಿದೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಮೈತ್ರಿ ಸರ್ಕಾರವನ್ನು ಭದ್ರ ಪಡಿಸಿಕೊಳ್ಳಲು ಕಾರ್ಯತಂತ್ರವನ್ನು ರೂಪಿಸಿದ್ದರು. ಪಕ್ಷೇತರ ಶಾಸಕರು ಬಿಜೆಪಿಗೆ ಹೋಗುವುದನ್ನು ತಪ್ಪಿಸಲು ಹಾಗೂ ಮೈತ್ರಿ ಸರ್ಕಾರವನ್ನು ಸುಭದ್ರಗೊಳಿಸಿಕೊಳ್ಳುವ ಉದ್ದೇಶದಿಂದ ಅವರಿಬ್ಬರಿಗೂ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿತ್ತು.
ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾಗಿದ್ದ ಒಂದು ಸಚಿವ ಸ್ಥಾನವನ್ನು ಕಾಂಗ್ರೆಸ್ ಪಕ್ಷ ಆರ್.ಶಂಕರ್ಗೆ ನೀಡಿದೆ. ಈ ಹಿಂದೆ ಕೂಡ ಕಾಂಗ್ರೆಸ್ ಪಕ್ಷದ ಖೋಟಾದಡಿಯಲ್ಲೇ ಶಂಕರ್ ಸಚಿವರಾಗಿದ್ದರು.
ಜೆಡಿಎಸ್ ಖೋಟಾದಡಿಯಲ್ಲಿ ನಾಗೇಶ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಬಾಕಿ ಉಳಿದಿರುವ ಮತ್ತೊಂದು ಸಚಿವ ಸ್ಥಾನಕ್ಕೆ ಯಾರನ್ನೂ ನೇಮಿಸದೆ ಖಾಲಿ ಉಳಿಸಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಸಂಪುಟವನ್ನು ಮೂರನೇ ಬಾರಿಗೆ ವಿಸ್ತರಣೆ ಮಾಡಿದ್ದು, ಇನ್ನೂ ಒಂದು ಸಚಿವ ಸ್ಥಾನ ಬಾಕಿ ಉಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಕಳೆದ ವರ್ಷ ಮೇ 23ಕ್ಕೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ಆನಂತರ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಂಪುಟ ವಿಸ್ತರಣೆ ಮೊದಲ ಬಾರಿಗೆ ಮಾಡಲಾಗಿತ್ತು.ನಂತರ ಎರಡನೇ ಬಾರಿಗೆ ಇಬ್ಬರು ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಕಾಂಗ್ರೆಸ್ನ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು.ಆದರೂ ಕಾಂಗ್ರೆಸ್ನಲ್ಲಿ ಅಸಮಾಧಾನ ಗೊಂಡಿರುವ ಶಾಸಕರು ಸಮಾಧಾನಗೊಳ್ಳುವ ಪರಿಸ್ಥಿತಿ ಕಂಡು ಬರಲಿಲ್ಲ. ಹೀಗಾಗಿ ಸಂಪುಟ ಪುನಾರಚನೆ ಮಾಡಿ ಅತೃಪ್ತರನ್ನು ಸಮಾಧಾನಗೊಳಿಸುವ ಪ್ರಯತ್ನಕ್ಕೂ ಮುಂದಾಗಿದ್ದರು.
ಆದರೆ ಉಭಯ ಪಕ್ಷಗಳ ನಾಯಕರ ನಡುವೆ ಈ ವಿಚಾರದಲ್ಲಿ ಸಹಮತ ಮೂಡದ ಹಿನ್ನೆಲೆಯಲ್ಲಿ ಮೊದಲಿಗೆ ಸಂಪುಟ ವಿಸ್ತರಣೆ ಮಾಡುವುದು, ಕೆಲವರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಿ ಅತೃಪ್ತಿ ಕಡಿಮೆ ಮಾಡಿ ಆನಂತರ ಸಂಪುಟ ಪುನಾರಚನೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.