ಬೆಂಗಳೂರು,ಜೂ.14- ತೀವ್ರ ವಿವಾದಕ್ಕೆ ಗುರಿಯಾಗಿರುವ ಜಿಂದಾಲ್ ಕಂಪೆನಿಗೆ ಭೂಮಿ ಮಾರಾಟ ನಿರ್ಣಯವನ್ನು ಇಂದು ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪುನರ್ ಪರಿಶೀಲನೆಗೆ ಒಳಪಡಿಸಲಾಗುತ್ತದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸಂಪುಟವನ್ನು ಮೂರನೇ ಬಾರಿಗೆ ವಿಸ್ತರಣೆ ಮಾಡುತ್ತಿದ್ದು, ಅನಂತರ ಸಂಜೆ ಸಂಪುಟದ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಜಿಂದಾಲ್ ಕಂಪೆನಿಗೆ ಭೂಮಿ ಮಾರಾಟದ ಸರ್ಕಾರದ ನಿರ್ಣಯ ಮರುಪರಿಶೀಲನೆಗೆ ಒಳಪಡಲಿದೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ 3667.31ಎಕರೆ ಭೂಮಿಯನ್ನು ಜಿಂದಾಲ್ನ ಜೆಎಸ್ಡಬ್ಲ್ಯೂ ಸ್ಟೀಲ್ ಲಿಮಿಟೆಡ್ಗೆ ಶುದ್ಧ ಕ್ರಯ ಮಾಡಿಕೊಡಲು ಕಳೆದ ಮೇ 27ರಂದು ನಡೆದ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು.
ಆದರೆ, ಇದಕ್ಕೆ ಸಾರ್ವಜನಿಕ ವಲಯದಲ್ಲಷ್ಟೇ ಅಲ್ಲ ಆಡಳಿತ ಪಕ್ಷದಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಕಾಂಗ್ರೆಸ್ನ ಅನೇಕ ನಾಯಕರು ಸರ್ಕಾರದ ನಿರ್ಣಯವನ್ನು ವಿರೋಧಿಸಿದ್ದರು.
ವಿರೋಧ ಪಕ್ಷ ಬಿಜೆಪಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿತ್ತು. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿರ್ಣಯವನ್ನು ಮರುಪರಿಶೀಲನೆಗೆ ಒಳಪಡಿಸಲು ಮುಂದಾಗಿದ್ದಾರೆ.
ಶುದ್ಧ ಕ್ರಯ ಮಾಡಿಕೊಡುವ ನಿರ್ಣಯವನ್ನು ಹಿಂಪಡೆಯುವ ಅಥವಾ ಕ್ರಯದ ಬದಲಿಗೆ ಗುತ್ತಿಗೆ ಅವಧಿಯನ್ನು ಮುಂದುವರೆಸುವ ಸಾಧ್ಯತೆಗಳಿವೆ.
ಕಾನೂನಾತ್ಮಕವಾಗಿ ಈಗಾಗಲೇ ಸಾಕಷ್ಟು ಚರ್ಚೆಗಳಾಗಿದ್ದು, ಇಂದು ಸಂಜೆ ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಕರ್ನಾಟಕಕ್ಕೆ ಬಂಡವಾಳ ಆಕರ್ಷಿಸಲು ಮುಂದಿನ ವರ್ಷ ಜನವರಿ 16ರಿಂದ 18ರವರೆಗೆ ಬೆಂಗಳೂರಿನ ಅರಮನೆಯಲ್ಲಿ ಇನ್ವೆಸ್ಟ್ ಕರ್ನಾಟಕ-2020 ಆಯೋಜಿಸಲು ನಿರ್ಧರಿಸಲಾಗಿದ್ದು, ಇದಕ್ಕೆ 50ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ. ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಅಗತ್ಯವಾದ ಪೂರ್ವ ತಯಾರಿಗಾಗಿ ಇಂದಿನ ಸಂಪುಟ ಸಭೆ ಹಸಿರು ನಿಶಾನೆ ತೋರಿಸಲಿದೆ.
ಕರ್ನಾಟಕ ಸ್ಟಾಟ್ಅಪ್ ನೀತಿ 2015-2020ಕ್ಕೆ ಅಗತ್ಯ ತಿದ್ದುಪಡಿ ಮಾಡಲು ಸಂಪುಟ ಸಭೆ ಅಂಗೀಕಾರ ನೀಡಲಿದೆ.
ದೇವಾಲಯಗಳ ಅರ್ಚಕರು ಮತ್ತು ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಹಲವಾರು ವಿಷಯಗಳನ್ನು ಇಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ನಿವೃತ್ತ ಐಎಎಸ್ ಅಧಿಕಾರಿ ಭರತ್ಲಾಲ್ ಮೀನಾ ವಿರುದ್ಧ ಲೋಕಾಯುಕ್ತರು ಮಾಡಿದ್ದ ಶಿಫಾರಸನ್ನು ಕೈ ಬಿಡುವ ಸಾಧ್ಯತೆ ಇದೆ.