ಬೆಂಗಳೂರು, ಜೂ.14-ಸಂಪುಟ ವಿಸ್ತರಣೆಯ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಇಂದು ಪಕ್ಷೇತರರಿಬ್ಬರು ಪ್ರಮಾಣವಚನ ಸ್ವೀಕರಿಸಿದರೆ, ಕಾಂಗ್ರೆಸ್-ಜೆಡಿಎಸ್ ಆಕಾಂಕ್ಷಿಗಳು ನಿರಾಶರಾಗಿದ್ದಾರೆ.
ಒಟ್ಟು 34 ಮಂದಿಯ ಸಂಪುಟ ಗಾತ್ರದಲ್ಲಿ ಇಂದಿನ ವಿಸ್ತರಣೆಯ ಮೂಲಕ 33 ಮಂದಿಗೆ ಅವಕಾಶ ಸಿಕ್ಕಿದೆ. ಜೆಡಿಎಸ್ ಪಾಲಿನ ಇನ್ನೂ ಸ್ಥಾನ ಬಾಕಿ ಉಳಿದಿದೆ.
ಬಾಕಿ ಇರುವ ಮೂರೂ ಸ್ಥಾನಗಳಿಗೂ ಸಚಿವರನ್ನು ನೇಮಿಸಬಹುದು ಎಂಬ ನಿರೀಕ್ಷೆಗಳಿದ್ದವು. ಜೆಡಿಎಸ್ ತನ್ನ ಪಾಲಿನ ಎರಡು ಸ್ಥಾನಗಳ ಪೈಕಿ ಒಂದನ್ನು ಪಕ್ಷೇತರ ಶಾಸಕ ನಾಗೇಶ್ ಅವರಿಗೆ ಕೊಟ್ಟು, ಮತ್ತೊಂದಕ್ಕೆ ಅಲ್ಪಸಂಖ್ಯಾತ ಸಮುದಾಯ ಫಾರೂಕ್ ಅಥವಾ ಇನ್ಯಾರಿಗಾದರೂ ಅವಕಾಶ ಮಾಡಿಕೊಡಲಿದೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ ಎಲ್ಲ ಕುತೂಹಲಗಳಿಗೂ ತೆರೆ ಬಿದ್ದಿದ್ದು, ಕೇವಲ ಎರಡು ಸ್ಥಾನಗಳಿಗೆ ಮಾತ್ರ ಸಚಿವ ನೇಮಕಾತಿ ಆಗಿದೆ.
ಕಳೆದ ಆರೇಳು ತಿಂಗಳಿನಿಂದ ಸಚಿವ ಸ್ಥಾನದ ಆಕಾಂಕ್ಷಿಗಳು ಸಂಪುಟ ಸೇರಲು ಶಕ್ತಿ ಮೀರಿ ಲಾಬಿ ನಡೆಸಿದ್ದರು.ಎಲ್ಲರ ಪ್ರಯತ್ನಗಳು ವಿಫಲವಾಗಿದ್ದು, ನಿರೀಕ್ಷೆಗಳು ಹುಸಿಯಾಗಿವೆ. ನಾಳೆಯಿಂದ ರಾಜಕಾರಣ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಸಂಪುಟ ವಿಸ್ತರಣೆಯ ಅಸಮಾಧಾನ ನುಂಗಿಕೊಂಡು ಕಾಂಗ್ರೆಸ್-ಜೆಡಿಎಸ್ನ ಅತೃಪ್ತರು ಮೌನವಾಗಿರುತ್ತಾರೋ ಅಥವಾ ಬಹಿರಂಗ ಹೇಳಿಕೆಗಳನ್ನು ನೀಡಿ ಭಿನ್ನಮತೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.