ಬೆಂಗಳೂರು,ಜೂ.14- ಐಎಂಎ ಜುವೆಲ್ಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದವರು ಇಂದು ಕೂಡ ಮುಂಜಾನೆಯಿಂದಲೇ ದೂರು ನೀಡಲು ಬಂದಿದ್ದರಿಂದ ನೂಕು ನುಗ್ಗಲು ಉಂಟಾಯಿತು.
ಶಿವಾಜಿನಗರದ ಕನ್ವೆಷನ್ ಹಾಲ್ ಮುಂದೆ ಸಾಲುಗಟ್ಟಿ ದೂರುದಾರರು ನಿಂತಿದ್ದರು. ಈ ಪೈಕಿ ಟಿಟಿ ವಾಹನದ ಚಾಲಕ ಶೇಖ್ ಅತೀಕ್ ಎಂಬುವರು ತಾನು ದುಡಿದಿದ್ದ 6 ಲಕ್ಷ ಹಣವನ್ನು ಹೂಡಿಕೆ ಮಾಡಿದ್ದು, ಇದೀಗ ನನ್ನ ಕುಟುಂಬ ಬೀದಿಗೆ ಬಿದ್ದಿದೆ ಎಂದು ರೋಧಿಸುತ್ತಿದದ್ದು ಕಂಡುಬಂತು.
ಮೊದಲ ದಿನದಿಂದಲೂ ದೂರು ನೀಡಲು ಬರುತ್ತಲೇ ಇದ್ದು, ದೂರುದಾರರ ಸಂಖ್ಯೆ 30 ಸಾವಿರ ಗಡಿದಾಟುವ ಸಾಧ್ಯತೆ ಇದೆ. ರಾಜ್ಯದ ವಿವಿಧ ಮೂಲೆಗಳಿಂದಲೂ ದೂರುದಾರರು ಆಗಮಿಸುತ್ತಿರುವುದಲ್ಲದೆ ನೆರೆಯ ಆಂಧ್ರದಿಂದಲೂ ದೂರುಗಳು ಬರುತ್ತಿವೆ. ಕೆಲವರು ಖುದ್ದಾಗಿ ಬಂದು ದೂರು ನೀಡಿದರೆ ಇನ್ನು ಹಲವರು ರಿಜಿಸ್ಟರ್ ಪೋಸ್ಟ್ ಮೂಲಕ ದೂರುಗಳನ್ನು ನೀಡಿದ್ದಾರೆ.
ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಈಗಾಗಲೇ 7 ನಿರ್ದೇಶಕರನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದೆ.
ತನಿಖೆಗೆ ರಚಿಸಲಾಗಿರುವ ಎರಡು ತಂಡಗಳ ಪೈಕಿ ಒಂದು ತಂಡ ವಂಚಕ ಮನ್ಸೂರ್ಖಾನ್ ಎಲ್ಲಿ ತಲೆಮರೆಸಿಕೊಂಡಿದ್ದಾನೆಂಬ ಬಗ್ಗೆ ಪತ್ತೆಹಚ್ಚಲು ಸತತ ಪ್ರಯತ್ನ ಮಾಡುತ್ತಿದೆ.
ಮತ್ತೊಂದು ತಂಡ ಆರೋಪಿ ಮಹಮದ್ ಮನ್ಸೂರ್ ಹಣದ ವಹಿವಾಟಿನ ಬಗ್ಗೆ ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆಂಬ ಬಗ್ಗೆ ಮತ್ತು ಈತ ಹೊಂದಿರುವ ಆಸ್ತಿಗಳ ಬಗ್ಗೆ ತನಿಖೆ ನಡೆಸುತ್ತಿದೆ.
ಒಟ್ಟಾರೆ ಐಎಂಎ ಜುವೆಲ್ಸ್ ಕಂಪನಿಯ ದೋಖಾದಿಂದ ಸಾವಿರಾರು ಕುಟುಂಬಗಳು ಕಣ್ಣೀರು ಹಾಕುತ್ತಿದ್ದು, 5ನೇದಿನವಾದ ಇಂದು ಸಹ ದೂರುಗಳು ಬರುತ್ತಿರುವುದು ಶೋಚನೀಯ ಸಂಗತಿ.