ಬೆಂಗಳೂರು,ಜೂ.14- ಸಚಿವ ಸಂಪುಟದಲ್ಲಿ ಅವಕಾಶ ಸಿಗದೆ ಅತೃಪ್ತರಾಗಿರುವ ಕಾಂಗ್ರೆಸ್ ಶಾಸಕರಿಗೆ ಡಿಸೆಂಬರ್ವರೆಗೂ ತಾಳ್ಮೆಯಿಂದಿರುವಂತೆ ಕಾಂಗ್ರೆಸ್ ಹೈಕಮಾಂಡ್ ಕಿವಿಮಾತು ಹೇಳಿದೆ.
ಮೈತ್ರಿ ಸರ್ಕಾರದಲ್ಲಿ ಸಚಿವರಾಗಲೇಬೇಕೆಂದು ಹಲವಾರು ಮಂದಿ ಲಾಭಿ ನಡೆಸಿದ್ದರು. ಕೆಲವರು ದೆಹಲಿವರೆಗೂ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಒತ್ತಡ ಹೇರಿದ್ದರು.
ಆದರೆ, ರಾಜ್ಯದಿಂದ ಆಗಮಿಸಿದ ಯಾವುದೇ ನಾಯಕರನ್ನು ಭೇಟಿ ಮಾಡದ ಹೈಕಮಾಂಡ್, ಕರ್ನಾಟಕ ಕಾಂಗ್ರೆಸ್ನಲ್ಲಿರುವ ನಾಯಕರನ್ನೇ ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ದೆಹಲಿವರೆಗೂ ಪ್ರಯಾಣ ಬೆಳೆಸಿದ ನಾಯಕರಿಗೆ ಬಂದ ದಾರಿಗೆ ಶುಂಕವಿಲ್ಲದಂತಾಗಿದೆ.
ಪ್ರಸ್ತುತ ಸಂದರ್ಭದಲ್ಲಿ ಸಂಪುಟ ಪುನರ್ರಚನೆ ಬೇಡ. ಖಾಲಿ ಇರುವ ಸ್ಥಾನಗಳಿಗೆ ಭರ್ತಿ ಮಾಡಲು ವಿಸ್ತರಣೆ ಮಾತ್ರ ಸಾಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಠ ಹಿಡಿದಿದ್ದರು.
ಹೀಗಾಗಿ ಸಂಪುಟ ಪುನರ್ರಚನೆಯನ್ನು ಕೈ ಬಿಟ್ಟು, ಹಿರಿಯರಿಗೆ, ಕ್ರಿಯಾಶೀಲರಿಗೆ ಅವಕಾಶ ನೀಡಬೇಕೆಂದು ಬಹಳಷ್ಟು ಮಂದಿ ಅತೃಪ್ತರು ಒತ್ತಾಯಿಸಿದ್ದರು.
ಇಂದಿನ ಸಂದರ್ಭದಲ್ಲಿ ಯಾರನ್ನೇ ಕೈ ಬಿಟ್ಟರೂ ಸಮಸ್ಯೆ ಉಲ್ಬಣಗೊಳ್ಳಲಿದೆ. ಹಾಗಾಗಿ ಯಾರೂ ಬೇಸರಗೊಳ್ಳಬಾರದು. ಮುಂದಿನ ಡಿಸೆಂಬರ್ ಒಳಗೆ ಸಂಪುಟವನ್ನು ಒಟ್ಟಾರೆಯಾಗಿ ಪುನರ್ರಚನೆ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಎಲ್ಲರಿಗೂ ಅವಕಾಶಗಳು ಸಿಗುತ್ತವೆ. ಅಲ್ಲಿವರೆಗೂ ತಾಳ್ಮೆಯಿಂದಿರಿ. ಸಮ್ಮಿಶ್ರ ಸರ್ಕಾರ ಒಂದಷ್ಟು ದಿನ ಸುಗಮವಾಗಿ ಆಡಳಿತ ನಡೆಸಲಿ ಎಂದು ಕಾಂಗ್ರೆಸ್ ನಾಯಕರು ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ಆದರೆ, ಇದು ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎಂದು ಸಂಪುಟ ವಿಸ್ತರಣೆಯ ನಂತರವಷ್ಟೇ ಗೊತ್ತಾಗಲಿದೆ.
ಒಳಗೊಳಗೆ ಕಾಂಗ್ರೆಸ್ ನಾಯಕರ ವಿರುದ್ಧ ಬಹಳಷ್ಟು ಮಂದಿ ಶಾಸಕರು ಕುದಿಯುತ್ತಿದ್ದು, ಆ ಅಸಮಾಧಾನ ಯಾವಾಗ ಸ್ಪೋಟಗೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಬಿಜೆಪಿ ಆಪರೇಷನ್ ಕಮಲವನ್ನು ಸದ್ಯಕ್ಕೆ ನಿಲ್ಲಿಸಿದಂತಿದ್ದು, ಕಾಂಗ್ರೆಸ್-ಜೆಡಿಎಸ್ ಅತೃಪ್ತರಿಗೆ ಪರ್ಯಾಯ ವೇದಿಕೆ ಇಲ್ಲದೇ ಇರುವುದರಿಂದ ಬಹಿರಂಗವಾಗಿ ಮಾತನಾಡದೆ ತಟಸ್ಥವಾಗಿ ಉಳಿದಿದ್ದಾರೆ.
ಆದರೆ, ಯಾವ ಸಂದರ್ಭದಲ್ಲಾದರೂ ಇದು ಸ್ಫೋಟಗೊಳ್ಳಬಹುದಾಗಿದ್ದು, ಅಸಮಾಧಾನ ಬೂದಿಮುಚ್ಚಿದ ಕೆಂಡದಂತಿದೆ.