ಬೆಂಗಳೂರು,ಜೂ.14- ಎಪ್ಪತ್ತೈದು ವಸಂತಗಳನ್ನು ಪೂರೈಸಿರುವ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಅವರ ಜೀವನದ ಮಹತ್ತದ ಸಾಧನೆಗಳಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ ಬೆಳ್ಳಿಹೆಜ್ಜೆ ಕಾರ್ಯಕ್ರಮ ಸಾಕ್ಷಿಯಾಗಲಿದೆ.
ಜೂ.15ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರಕಲಾಕ್ಷೇತ್ರದಲ್ಲಿ ನಡೆಯುವ ಬೆಳ್ಳಿಹೆಜ್ಜೆಯಲ್ಲಿ ನಿರ್ಮಾಪಕ, ವಿತರಕ ಎಸ್.ಎ.ಚಿನ್ನೇಗೌಡರು ಭಾಗವಹಿಸಲಿದ್ದಾರೆ.
ಚಿತ್ರರಂಗದ ಮೂರು ತಲೆಮಾರುಗಳನ್ನು ಕಂಡಿರುವ ಚಿನ್ನೇಗೌಡರು ಅವರು ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಕನ್ನಡದ ಮೇರುನಟ ಡಾ.ರಾಜ್ಕುಮಾರ್ ಅವರ ಕುಟುಂಬದವರಲ್ಲಿ ಒಬ್ಬರಾದ ಚಿನ್ನೇಗೌಡರ ಕೊಡುಗೆ ಚಿತ್ರರಂಗಕ್ಕೆ ಅಪಾರ.
ಕನ್ನಡ ನಾಡಿಗೆ ಅಪೂರ್ವವೆನಿಸಬಹುದಾದ ಉತ್ತಮ ಕಥೆ, ಚಿತ್ರಗಳನ್ನು ನೀಡಿರುವ ಹೆಗ್ಗಳಿಕೆ ಇವರದು.ಪ್ರಮುಖವಾಗಿ ಪೌರಾಣಿಕ ಪಾತ್ರದಲ್ಲಿ ಡಾ.ರಾಜ್ಕುಮಾರ್ ನಟಿಸಿರುವ ಶ್ರೀನಿವಾಸ ಕಲ್ಯಾಣ ಕನ್ನಡ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲಾಗಿತ್ತು.ರಾಜ್ ಅವರ ನಾಯಕತ್ವದಲ್ಲಿ ಜ್ವಾಲಾಮುಖಿ, ಹೊಸಬೆಳಕು ಚಿತ್ರಗಳು ಚಿತ್ರರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದಿವೆ.
ಇವರ ನಿರ್ಮಾಣದ ಹೃದಯ ಹಾಡಿತು, ಸಪ್ತಪದಿ, ಸಮ್ಮಿಲನ, ಮನಮೆಚ್ಚಿದ ಹುಡುಗ, ರೂಪಾಯಿ ರಾಜ, ಚಿಕ್ಕ, ಶ್ರೀಹರಿಕಥೆ ಮುಂತಾದ ಚಿತ್ರಗಳು ಇಂದಿಗೂ ಎಲ್ಲರ ನೆನಪಿನಲ್ಲಿವೆ.
ಪಾರ್ವತಮ್ಮ ರಾಜ್ಕುಮಾರ್ ಅವರ ಸಹೋದರರಾದ ಚಿನ್ನೇಗೌಡ ಬೆಂಗಳೂರಿಗೆ ಬಂದದ್ದು ಆಕಸ್ಮಿಕ. ಮೂಲತಃ ಶಿಕ್ಷಕರಾಗಿದ್ದ ಚಿನ್ನೇಗೌಡರು ಪಾರ್ವತಮ್ಮ ಅವರ ಒತ್ತಾಸೆಯಿಂದ ಬೆಂಗಳೂರಿಗೆ ಬಂದು ನೆಲೆಸಿದರು.
ಆ ದಿನಗಳಲ್ಲಿ ಡಾ.ರಾಜ್ಕುಮಾರ್ ಚಿತ್ರರಂಗದಲ್ಲಿ ಬಿಡುವಿಲ್ಲದ ನಟರಾಗಿದ್ದರು.ಪಾರ್ವತಮ್ಮ ಅವರಿಗೆ ಮನೆ ಮತ್ತು ರಾಜ್ಕುಮಾರ್ ಅವರ ವೃತ್ತಿ ಜೀವನ ಎರಡನ್ನೂ ನಿಭಾಯಿಸುವುದು ಒತ್ತಡದ ಕೆಲಸವಾಗಿತ್ತು.ಆ ಸಂದರ್ಭದಲ್ಲಿ ಚಿನ್ನೇಗೌಡರನ್ನು ಬೆಂಗಳೂರಿಗೆ ಕರೆಸಿಕೊಂಡು ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಜವಾಬ್ದಾರಿ ವಹಿಸಿದರು.
ಅಕ್ಕ-ಭಾವನ ಸಲಹೆಯಂತೆ ಜವಾಬ್ದಾರಿ ಹೊತ್ತುಕೊಂಡ ಚಿನ್ನೇಗೌಡರು ಅದನ್ನ ಶಿಸ್ತುಬದ್ಧವಾಗಿ ಬೆಳೆಸಲು ಹಗಲಿರುಳು ದುಡಿದರು.
ಸತತ 10 ವರ್ಷಗಳ ಕಾಲ ಆ ಸಂಸ್ಥೆಯಲ್ಲಿ ದುಡಿದ ಚಿನ್ನೇಗೌಡರಿಗೆ ಚಿತ್ರ ನಿರ್ಮಾಣದ ಕಡೆಗೂ ಒಲವಿತ್ತು. ನಂತರ ತಮ್ಮದೇ ಆದ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣ ಮಾಡಿದರು ಮತ್ತು ಸಾಕಷ್ಟು ಚಿತ್ರಗಳ ವಿತರಣೆಯ ಹಕನ್ನು ಸುಸೂತ್ರವಾಗಿ ನಿಭಾಯಿಸಿದರು.
ಇತ್ತೀಚೆಗಷ್ಟೆ ತಮ್ಮ ಮದುವೆಯ ಸುವರ್ಣ ಮಹೋತ್ಸವ ಆಚರಿಸಿಕೊಂಡಿದ್ದಾರೆ.ಚಿನ್ನೇಗೌಡರ ಪತ್ನಿ ಜಯಮ್ಮ ಕೂಡ ನಿರ್ಮಾಪಕಿಯಾಗಿದ್ದು, ಪುತ್ರ ವಿಜಯರಾಘವೇಂದ್ರ ಅಭಿನಯದ ಸೇವಂತಿ ಸೇವಂತಿ ಹಾಗೂ ಖುಷಿ ಚಿತ್ರಗಳ ನಿರ್ಮಿಸಿದ್ದಾರೆ. ಮತ್ತೊಬ್ಬ ಪುತ್ರ ಶ್ರೀಮುರುಳಿ ರೆಬಲ್ ಇಮೇಜಿನಲ್ಲಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.
ಚಲನಚಿತ್ರರಂಗದ ಛಾಯೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿರುವ ಚಿನ್ನೇಗೌಡರು ಸ್ವಭಾವತಃ ಅತ್ಯಂತ ವಿನಯಿ, ಮೃಧು ಸ್ವಭಾವದವರು.ಅಪಾರ ದೈವಭಕ್ತರು. ಹಲವಾರು ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕನ್ನಡ ಚಲನಚಿತ್ರರಂಗದಲ್ಲಿ ಸಾಧನೆಗೈದ ಮಹನೀಯರನ್ನು ಅಭಿನಂದಿಸುವ ವಿಶಿಷ್ಟ ಕಾರ್ಯಕ್ರಮ ಬೆಳ್ಳಿಹೆಜ್ಜೆಯಲ್ಲೂ ಚಲನಚಿತ್ರ ಅಕಾಡೆಮಿ ಮೊದಲಿನಿಂದಲೂ ನಡೆಸಿಕೊಂಡು ಬರುತ್ತಿದೆ. ಈ ಬಾರಿ ಚಿನ್ನೇಗೌಡರು ಇದರಲ್ಲಿ ಭಾಗಿಯಾಗುತ್ತಿದ್ದು, ಪತ್ರಕರ್ತ ಜೋಗಿ ಅವರು ಸಂವಾದವನ್ನು ನಿರ್ವಹಣೆ ಮಾಡಲಿದ್ದಾರೆ.
ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದು, ಸಚಿವೆ ಜಯಮಾಲಾ, ಅಭಿನಯ ಶಾರದೆ ಜಯಂತಿ, ಹಿರಿಯ ನಟ ಎಸ್.ಶಿವರಾಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಭೃಂಗೀಶ್, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ವಿಜಯರಾಘವೇಂದ್ರ, ಶ್ರೀಮುರಳಿ, ಸುಂದರ್ರಾಜ್, ನಿರ್ದೇಶಕರಾದ ಟಿ.ಎಸ್.ನಾಗಾಭರಣ, ಸಾಯಿಪ್ರಕಾಶ್, ನಿರ್ಮಾಪಕರಾದ ರಾಮು, ನಟಿಯರಾದ ಮಾಲಾಶ್ರೀ, ಸುಧಾರಾಣಿ ಹಾಗೂ ಚಿನ್ನೇಗೌಡರ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ.