ಬೆಂಗಳೂರು,ಜೂ.14-ಜಿಂದಾಲ್ ಕಂಪನಿಗೆ ನೀಡಿರುವ ಭೂಮಿಯನ್ನು ವಾಪಸ್ ಪಡೆಯುವುದು, ಐಎಂಎ ಹಗರಣ ಸಿಬಿಐಗೆ ವಹಿಸುವುದು ಮತ್ತು ರೈತರ ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯಿಸಿರುವ ಬಿಜೆಪಿ, ದೋಸ್ತಿ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಇಂದು ಅಹೋರಾತ್ರಿ ಧರಣಿ ನಡೆಸುವ ಮೂಲಕ ರಣಕಹಳೆ ಮೊಳಗಿಸಿದೆ.
ನಗರದ ಮೌರ್ಯವೃತ್ತದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಮುಖಂಡರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದಕಾರಜೋಳ, ಕೋಟಾ ಶ್ರೀನಿವಾಸ್ ಪೂಜಾರಿ, ವಿ.ಸೋಮಣ್ಣ, ಶ್ರೀರಾಮುಲು, ಸೇರಿದಂತೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಸದಸ್ಯರು , ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನಾನಿರತರು, ಇದೊಂದು ಭ್ರಷ್ಟ ಸರ್ಕಾರ.ಜಿಂದಾಲ್ ಕಂಪನಿಯಿಂದ ಕಿಕ್ಬ್ಯಾಕ್ ಪಡೆದಿರುವ ಸರ್ಕಾರ ಎಂದು ಘೋಷಣೆ ಕೂಗುತ್ತಾ, ಐಎಂಎ ಹಗರಣದಲ್ಲಿ ಭಾಗಿಯಾಗಿರುವ ಸಚಿವ ಜಮೀರ್ ಅಹಮ್ಮದ್ ಅವರನ್ನು ಬಂಧಿಸಬೇಕು, ಜಿಂದಾಲ್ ಕಂಪನಿಗೆ ನೀಡಿರುವ ಜಮೀನನ್ನು ಕೂಡಲೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮಾತನಾಡಿ, ಕಳೆದ ಒಂದು ವರ್ಷದಿಂದ ಜನರ ಕೈಗೆ ಸಿಗದೆ ಪೈಸ್ಟಾರ್ನಲ್ಲಿ ಉಳಿದುಕೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಸರ್ಕಾರಿ ಶಾಲೆಯಲ್ಲಿ ಗ್ರಾಮವಾಸ್ತವ್ಯ ಮಾಡುತ್ತೇನೆಂದು ಹೊರಟಿರುವುದು ಜನರಿಗೆ ಇನ್ನೊಂದು ರೀತಿಯ ಮಕ್ಮಲ್ ಟೋಪಿ ಹಾಕಲು ಹೊರಟಂತಿದೆ. ಅಧಿಕಾರಕ್ಕೆ ಬಂದಾಗ ಸಿಗದಿದ್ದವರು, ಲೋಕಸಭೆ ಚುನಾವಣೆ ಫಲಿತಾಂಶದಿಂದ ಎಚ್ಚೆತ್ತುಕೊಂಡು ವಾಸ್ತವ್ಯಕ್ಕೆ ಹೊರಟಿದ್ದಾರೆ ಎಂದು ಕಿಡಿಕಾರಿದರು.
ಜನರಿಗೆ ಎಷ್ಟು ಬಾರಿ ನೀವು ವಂಚಿಸಲು ಸಾಧ್ಯ? ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ಜನರಿಗೆ ಭರವಸೆ ನೀಡಿದ್ದರಿಂದ ನಿಮಗೆ 38 ಸ್ಥಾನಗಳು ಬಂದವು. ಇಲ್ಲದಿದ್ದರೆ ಒಂದಂಕಿಯನ್ನು ದಾಟುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ನೀವು ಜನರಿಗೆ ಮೋಸ ಮಾಡುತ್ತಿದ್ದೀರಿ ಎನ್ನುವ ಕಾರಣಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಜನತೆ ನಿಮ್ಮ ಪಕ್ಷಕ್ಕೆ ಒಂದು ಸ್ಥಾನವನ್ನು ಕೊಟ್ಟರು. ಖುದ್ದು ಮಂಡ್ಯದಲ್ಲಿ ನಿಮ್ಮ ಮಗನನ್ನೇ ಸೋಲಿಸುವುದರ ಜೊತೆಗೆ ತುಮಕೂರಿನಲ್ಲಿ ನಿಮ್ಮ ತಂದೆಯನ್ನೂ ಪರಾಭವಗೊಳಿಸಿದರು.ಯಾವ ನೈತಿಕತೆ ಮೇಲೆ ನೀವು ಅಧಿಕಾರದಲ್ಲಿ ಮುಂದುವರಿಯುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಒಂದು ವರ್ಷದ ಸರ್ಕಾರದ ಸಾಧನೆ ಎಂದರೆ ಜನರಿಗೆ ಟೋಪಿ ಹಾಕಿರುವುದು, ವರ್ಗಾವಣೆ ದಂಧೆ, ಯೋಜನೆಗಳ ಹಣವನ್ನು ಲೂಟಿ ಹೊಡೆಯುತ್ತಿರುವುದು ನಿಮ್ಮ ಸರ್ಕಾರದ ಸಾಧನೆ. ಫಲಿತಾಂಶ ಪ್ರಕಟಗೊಂಡ ಬಳಿಕ ಜನರು ನೆನಪಾಗಿದ್ದಾರೆ ಎಂದು ಕುಹುಕವಾಡಿದರು.
ಕುಮಾರಸ್ವಾಮಿ ತಾಜ್ವೆಸ್ಟಂಡ್ನಲ್ಲಿ ಉಳಿದುಕೊಂಡಿದ್ದೆ ಕಿಕ್ಬ್ಯಾಕ್ ಹೊಡೆಯಲು. ವಿಧಾನಸೌಧದಲ್ಲಿ ಇದ್ದಿದ್ದರೆ ಜನರಿಗೆ ನಿಮ್ಮ ಅಕ್ರಮ ದಂಧೆ ಗೊತ್ತಾಗಬಹುದೆಂಬ ಕಾರಣಕ್ಕಾಗಿ ಫೈಸ್ಟಾರ್ ಹೋಟೆಲ್ನಲ್ಲಿ ಉಳಿದುಕೊಂಡಿರಿ.ಕಾಂಗ್ರೆಸಿಗರು ಎಚ್ಚರಿಸಿದ ಮೇಲೆ ಗ್ರಾಮವಾಸ್ತವ್ಯಕ್ಕೆ ಹೊರಟಿದ್ದೀರಿ ಎಂದು ಹರಿಹಾಯ್ದರು.
ಐಎಂಎ ಹಗರಣದಲ್ಲಿ ನಿಮ್ಮ ಸಂಪುಟದ ಸಹೋದ್ಯೋಗಿಗಳೇ ಶಾಮೀಲಾಗಿದ್ದಾರೆ. ಈ ಸಂಸ್ಥೆಯು ಸಾರ್ವಜನಿಕರಿಗೆ ವಂಚನೆ ಮಾಡುವ ಸಾಧ್ಯತೆ ಇದೆ ಎಂದು ಆರ್ಬಿಐ ಪತ್ರ ಬರೆದಿದ್ದರೂ ಎಚ್ಚೆತ್ತುಕೊಳ್ಳಲಿಲ್ಲ. ಎಲ್ಲ ಮುಗಿದ ಮೇಲೆ ಈಗ ಎಸ್ಐಟಿಗೆ ವಹಿಸಿದ್ದೀರಿ. ಇದು ಪ್ರಕರಣ ಮುಚ್ಚಿ ಹಾಕುವ ಹುನ್ನಾರವೇ ಹೊರತು.ನೊಂದವರಿಗೆ ನ್ಯಾಯ ಸಿಗುವುದಿಲ್ಲ.
ನಿಮಗೆ ನಿಜವಾಗಿಯೂ ಜನರ ಮೇಲೆ ಕಳಕಳಿ ಇದ್ದರೆ ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಆಗ್ರಹಿಸಿದರು.
ಬಳ್ಳಾರಿಯ ಜಿಂದಾಲ್ ಕಬ್ಬಿಣ ಮತ್ತು ಉಕ್ಕು ಕಂಪನಿಗೆ ಮಾರಾಟ ಮಾಡಲು ಮುಂದಾಗಿರುವ 3.5 ಸಾವಿರ ಎಕರೆ ಜಮೀನನ್ನು ಕೂಡಲೇ ಹಿಂಪಡೆಯಬೇಕು. ಇದರಲ್ಲಿ ದೊಡ್ಡ ಪ್ರಮಾಣದ ಕಿಕ್ಬ್ಯಾಕ್ ನಡೆದಿರುವ ಸಾಧ್ಯತೆ ಇದೆ.
ಇಂದು ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು.ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದುದಾಗಿ ಬಿಎಸ್ವೈ ಎಚ್ಚರಿಸಿದರು.
ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಿದ್ದರಾಮಯ್ಯನವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೌಕಿದಾರ್ ಚೋರ್ ಹೆ ಎಂದು ದುರಾಹಂಕಾರದ ಮಾತುಗಳನ್ನಾಡುತ್ತಿದ್ದರು. ಇಂದು ಅದೇ ಸಿದ್ದರಾಮಯ್ಯನವರ ಪರಮಾಪ್ತ ಜಮೀರ್ ಅಹಮ್ಮದ್ ಖಾನ್ ಐಎಂಎ ವಂಚನೆಯಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ನಿಮಗೆ ಸ್ವಾಭಿಮಾನ ಇದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಸಿಎಂಗೆ ಶಿಫಾರಸ್ಸು ಮಾಡುತ್ತೀರ ಎಂದು ಪ್ರಶ್ನಿಸಿದರು.
ವಿಜಯಮಲ್ಯ, ನೀರವ್ ಮೋದಿ ದೇಶ ಬಿಟ್ಟು ಹೋಗಲು ಮೋದಿಯವರೇ ನೇರ ಕಾರಣ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಇಂದು ಐಎಂಎ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ದುಬೈಗೆ ಹೋಗಲು ಕಾಂಗ್ರೆಸ್-ಜೆಡಿಎಸ್ ನಾಯಕರೇ ನೇರ ಕಾರಣ ಎಂದು ಆರೋಪಿಸಿದರು.
ಇವರ ಅಕ್ರಮಗಳನ್ನು ಮುಚ್ಚಿ ಹಾಕಿಕೊಳ್ಳಲು ಐಎಂಎ ಸಂಸ್ಥೆಯನ್ನು ರಕ್ಷಣೆ ಮಾಡಿಕೊಳ್ಳಲು ಹೊರಟಿದ್ದೀರಿ, ಸಿಎಂ, ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು ಬಿರಿಯಾನಿ ಚಪ್ಪರಿಸಿದ್ದಾರೆ. ತಿಂದಿರುವ ಬಿರಿಯಾನಿಯನ್ನು ಕಕ್ಕಬೇಕಾದರೆ ಮೊದಲು ಹಗರಣವನ್ನುಸಿಬಿಐಗೆ ವಹಿಸಿ ಎಂದು ಒತ್ತಾಯಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಜಿಂದಾಲ್ ಕಂಪನಿಗೆ ನೀಡಿರುವ ಜಮೀನಿನಲ್ಲಿ ಕುಮಾರಸ್ವಾಮಿ , ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ ಅವರಿಗೆ ದೊಡ್ಡ ಮಟ್ಟದಲ್ಲಿ ಕಿಕ್ಬ್ಯಾಕ್ ಬಂದಿದೆ. ನಮ್ಮ ಆಡಳಿತಾವಧಿಯಲ್ಲಿ ಜಮೀನನ್ನು ಲೀಸ್(ಭೋಗ್ಯ)ಗೆ ನೀಡಿದ್ದವು. ಆದರೆ ಈ ಸರ್ಕಾರ ಮಾರಾಟ ಮಾಡಲು ಹೊರಟಿರುವ ಉದ್ದೇಶವೇನಾದರೂ ಏನು ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಬಳ್ಳಾರಿ ಜಿಲ್ಲಾ ಉಸ್ತುವಾರಿಯಾದಾಗಲೇ 108 ಅನುಮಾನಗಳು ಬಂದಿತ್ತು.ಈಗ ಜಮೀನು ಮಾರಾಟ ಮಾಡಲು ಹೊರಟಿರುವುದನ್ನು ನೋಡಿದರೆ ನಮ್ಮ ಸಂಶಯ ನಿಜವಾಗುತ್ತಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆದ್ದಿರುವ ಸಮ್ಮಿಶ್ರ ಸರ್ಕಾರಕ್ಕೆ ಆಡಳಿತ ನಡೆಸಲು ಯಾವುದೇ ನೈತಿಕತೆ ಇಲ್ಲ.ನೀವು ಪ್ರಾಮಾಣಿಕರಾಗಿದ್ದರೆ ಫಲಿತಾಂಶ ಪ್ರಕಟಗೊಂಡ ದಿನವೇ ರಾಜೀನಾಮೆ ನೀಡುತ್ತಿದ್ದಿರಿ. ನೀವೊಬ್ಬ ಭಂಡ ಮುಖ್ಯಮಂತ್ರಿ ಎಂದು ಶೋಭಾ ವಾಗ್ದಾಳಿ ನಡೆಸಿದರು.
ಐಎಂಎ ಹಗರಣದಲ್ಲಿ ಜಮ್ಮೀರ್ ಅಹಮ್ಮದ್ ಖಾನ್ ನೇರವಾಗಿ ಶಾಮೀಲಾಗಿದ್ದಾರೆ. ತಾಕೀತ್ತದ್ದರೆಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಸಂಸದರಾದ ಶೋಭ ಕರಂದ್ಲಾಜೆ, ಮಾಜಿ ಸಚಿವ ಸಿ.ಟಿರವಿ, ಆರ್.ಅಶೋಕ್, ಗೋವಿಂದ ಕಾರಜೋಳ ಸೇರಿದಂತೆ ಅನೇಕರು ಮಾತನಾಡಿದರು.