ಬೆಂಗಳೂರು,ಜೂ.13- ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್ನಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದ್ದು, ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ನೇಮಿಸುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸ್ತುತ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದು, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಮೈತ್ರಿ ಸರ್ಕಾರದ ಬಗ್ಗೆ ಅಪಸ್ವರದ ಮಾತುಗಳನ್ನಾಡುತ್ತಿರುವುದು ಸರ್ಕಾರದ ಪತನಕ್ಕೆ ಪ್ರಯತ್ನಿಸುತ್ತಿರುವವರಲ್ಲಿ ಸಿದ್ದರಾಮಯ್ಯನವರ ಬೆಂಬಲಿಗರೇ ಹೆಚ್ಚಾಗಿದೆ. ಹೈಕಮಾಂಡ್ ಇಷ್ಟು ಬಾರಿ ಎಚ್ಚರಿಕೆ ನೀಡಿದರೂ ಕಾಂಗ್ರೆಸ್ನ ಶಾಸಕರು ಸಮಾಧಾನಗೊಳ್ಳುತ್ತಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರದ ಭದ್ರತೆಗಾಗಿ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ನಾಯಕತ್ವ ಬದಲಾವಣೆ ಕುರಿತು ಚಿಂತನೆ ನಡೆಸಿದೆ.
ಕಾಂಗ್ರೆಸ್ ಶಾಕಾಂಗ ಪಕ್ಷದ ಸ್ಥಾನದಿಂದ ಸಿದ್ದು ಬದಲಾಗಿ ಡಿಕೆಶಿ ಅವರನ್ನು ನೇಮಿಸಬೇಕು, ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂರಿಸಬೇಕು ಎಂಬ ಚರ್ಚೆಗಳು ನಡೆದಿವೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬದಲಾವಣೆ ಮಾಡಿ ಪಕ್ಷದ ಸಾರಥ್ಯ ವಹಿಸುವ ಚರ್ಚೆಗಳು ನಡೆದಿವೆ. ಸದ್ಯಕ್ಕೆ ಯಾವುದೇ ಚುನಾವಣೆಗಳು ಇಲ್ಲದೆ ಇರುವುದರಿಂದ ಪಕ್ಷದ ನಾಯಕತ್ವವನ್ನು ಮುಂದಿನ ದಿನಗಳಲ್ಲಿ ಬದಲಾವಣೆ ಮಾಡಲು ಚರ್ಚೆ ನಡೆದಿದೆ.
ಸಂಪುಟ ವಿಸ್ತರಣೆ ನಂತರ ಸರ್ಕಾರದಲ್ಲಿ ಗೊಂದಲಗಳು ಏರ್ಪಟ್ಟರೆ, ಶಾಸಕರ ಅತೃಪ್ತಿ ಹೆಚ್ಚಾದರೆ ತಕ್ಷಣವೇ ಶಾಸಕಾಂಗ ಪಕ್ಷದ ನಾಯಕತ್ವ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.
ಡಿ.ಕೆ.ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಿದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉಳಿದ ನಾಲ್ಕು ವರ್ಷ ಕಾಲ ಸರ್ಕಾರ ಸುಭದ್ರವಾಗಿರುವಂತೆ ನೋಡಿಕೊಳ್ಳುತ್ತಾರೆ ಎಂಬ ವಿಶ್ವಾಸ ಹೈಕಮಾಂಡ್ಗಿದೆ.
ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯಲ್ಲಿ ಸೋತ ನಂತರ ಯಾವುದೇ ಅಧಿಕಾರವಿಲ್ಲದೆ ತಟಸ್ಥರಾಗಿ ಉಳಿದಿದ್ದಾರೆ. ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಸಿಗಬಹುದೆಂಬ ಚರ್ಚೆ ನಡೆದಿತ್ತು. ಒಂದು ವೇಳೆ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯಲು ನಿರಾಕರಿಸಿದರೆ ಪರ್ಯಾಯ ನಾಯಕತ್ವದ ವಿಷಯ ಬಂದಾಗ ಹೈಕಮಾಂಡ್ ಖರ್ಗೆ ಅವರಿಗೆ ಅವಕಾಶ ಕಲ್ಪಿಸುತ್ತದೆ ಎಂಬ ಮಾತುಗಳು ಬಂದಿದ್ದವು.
ಕೊನೆಯ ಹಂತದಲ್ಲಿ ರಾಹುಲ್ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರೆದರೆ ಆ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಸಿದ್ದರಾಮಯ್ಯನವರ ಬದಲು ಖರ್ಗೆ ನೇಮಕಗೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.
ಸಂಪುಟ ಪುನಾರಚನೆ ಬೆನ್ನಲ್ಲೇ ರಾಜಕೀಯವಾಗಿ ಭಿನ್ನಮತೀಯ ಚಟುವಟಿಕೆಗಳು ಭುಗಿಲೇಳುವ ನಿರೀಕ್ಷೆಗಳಿವೆ ಆ ಸಂದರ್ಭದಲ್ಲಿ ಹೈಕಮಾಂಡ್ ಅತೃಪ್ತರಿಗೆ ಎಚ್ಚರಿಕೆ ಕೊಡುವ ಸಲುವಾಗಿ ಕೆಲವು ಕಠಿಣ ನಿರ್ಧಾರಗಳನ್ನು ಪ್ರಕಟಿಸಲಿದೆ ಎಂಬ ವದಂತಿಗಳಿವೆ.