ಬೆಂಗಳೂರು, ಜೂ.13- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ತಾಲೂಕು ಶಾಖೆ ಹಾಗೂ ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿ ಚುನಾವಣೆಗೆ ಇಂದು ಮತದಾನ ಮುಗಿದಿದ್ದು, ಸಂಜೆ ಫಲಿತಾಂಶ ಪ್ರಕಟಗೊಳ್ಳಲಿದೆ.
ಇಂದು ಸಂಜೆ ಮತ ಎಣಿಕೆ ನಡೆದು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಕಳೆದ ಮೇ 27ರಿಂದ ಇಂದಿನವರೆಗೆ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಪ್ರತಿ ತಾಲೂಕಿನಲ್ಲಿ 35 ಸ್ಥಾನಗಳಿಗೆ ಪ್ರತಿ ಜಿಲ್ಲೆಯಲ್ಲಿ 62 ಸ್ಥಾನಗಳಿಗೆ ಮತದಾನ ನಡೆದಿದೆ.
ಬೆಂಗಳೂರು ನಗರದ 100 ಸ್ಥಾನಗಳಿಗೆ ಜೂನ್ 15 ರಿಂದ 26ರ ವರೆಗೆ ಮತದಾನ ನಡೆಯಲಿದ್ದು, ಈ ಅವಧಿಯಲ್ಲಿ ಪ್ರತಿದಿನ 10 ಇಲಾಖೆಗಳ ಚುನಾಯಿತ ಪ್ರತಿನಿಧಿಗಳ ಆಯ್ಕೆಗೆ ಮತದಾನ ನಡೆಯಲಿದೆ. ಮತದಾನ ಪೂರ್ಣಗೊಂಡ ನಂತರ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಬೆಂಗಳೂರು ನಗರದ ನೂರು ಸ್ಥಾನಗಳ ಪೈಕಿ ಈಗಾಗಲೇ ಕೆಲವು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ರಾಜ್ಯ ಸರ್ಕಾರಿ ನೌಕರರ ಸಂಘ 2019-2024ರ ಸಾಲಿಗೆ ಎಲ್ಲ ಹಂತದ ಚುನಾವಣೆಗಳಿಗೆ ಸಂಘದ ಚುನಾವಣಾಧಿಕಾರಿ ಅಶ್ವತ್ಥ ನಾರಾಯಣ್ ವೇಳಾಪಟ್ಟಿ ನಿಗದಿಪಡಿಸಿದ್ದು, ಪ್ರಕ್ರಿಯೆ ಜಾರಿಯಲ್ಲಿದೆ.
ಎರಡನೆ ಹಂತದಲ್ಲಿ ಜೂ.17 ರಿಂದ 27ರ ವರೆಗೆ ತಾಲೂಕು ಶಾಖೆ, ಯೋಜನಾ ಘಟಕಗಳ ಅಧ್ಯಕ್ಷರು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆ ನಡೆಯುತ್ತದೆ. ಆನಂತರ ಜುಲೈ 1 ರಿಂದ 11ರ ವರೆಗೆ ಮೂರನೆ ಹಂತದಲ್ಲಿ ಜಿಲ್ಲಾ ಶಾಖೆಯ ಅಧ್ಯಕ್ಷರು, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಚುನಾವಣೆ ಪ್ರಕ್ರಿಯೆ ಜರುಗಲಿದೆ.
ಅದಾದ ನಂತರ ಕೇಂದ್ರ ಸಂಘದ ಅಧ್ಯಕ್ಷರು, ಖಜಾಂಚಿ ಸ್ಥಾನದ ಚುನಾವಣೆ ಪ್ರಕ್ರಿಯೆ ಜುಲೈ 17 ರಿಂದ ಆಗಸ್ಟ್ 8ರ ವರೆಗೆ ನಡೆಯಲಿದೆ. ಇದರಲ್ಲಿ 514ಕ್ಕೂ ಹೆಚ್ಚು ಮತದಾರರಿರುವರು. ಇದಕ್ಕೆ ಜಿಲ್ಲೆ, ತಾಲೂಕು ಶಾಖೆ ಹಾಗೂ ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿ ಚುನಾವಣಾ ಸಮಿತಿ ಚುನಾಯಿತ ಸದಸ್ಯರನ್ನು ಹೊರತುಪಡಿಸಿ ಉಳಿದೆಲ್ಲ ಸದಸ್ಯರು ಮತದಾನ ಮಾಡಬಹುದು.