ಬೆಂಗಳೂರು: ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದು, ಕರಾವಳಿ ತೀರ ಪ್ರದೇಶಗಳಲ್ಲಿ ಹಾಗೂ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕಾರ್ಕಳ, ಕಾಪು, ಕುಂದಾಪುರ, ಬೈಂದೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಉಡುಪಿಯಲ್ಲಿ ನಿನ್ನೆ ಸಂಜೆ ಮೇಲೆ ಮುಂಗಾರು ಮಳೆ ಪ್ರಾರಂಭವಾಗಿದ್ದು, ರಾತ್ರಿ ಬಿದ್ದ ಮಳೆಗೆ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ನೀರಿನ ತೋಡುಗಳು ಮತ್ತು ಚರಂಡಿಗಳು ತುಂಬಿ ಹರಿಯುತ್ತಿವೆ. ಮಳೆಯ ಆರ್ಭಟಕ್ಕೆ ನಗರದ ನಾಯರ್ ಕೆರೆ ಮಸೀದಿ ಒಳಗೆ ನೀರು ನುಗ್ಗಿದೆ.
ಇನ್ನು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟ್ ಮತ್ತೆ ಕುಸಿಯುವ ಭೀತಿ ಇದೆ. ಈಗಾಗಲೇ ಅಲ್ಲಲ್ಲಿ ಗುಡ್ಡ,ಮರಗಳು ಕುಸಿದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಘಾಟ್ನಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಕೊಡಗಿನಲ್ಲಿ ಮತ್ತೆ ಮುಂಗಾರು ಮಳೆ ಚುರುಕಾಗಿದೆ. ಮೂರು ದಿನಗಳ ನಂತರ ಬೆಳಗ್ಗೆ ಬಿಡುವು ನೀಡಿದ್ದ ಮಳೆ, ಇಂದು ಮತ್ತೆ ಸುರಿಯುತ್ತಿದೆ. ಭಾರೀ ಮಳೆಗೆ ವಾಹನ ಸವಾರರು ಪರದಾಡುವಂತಾಗಿದೆ.
ಮಂಗಳೂರಿನ ಉಳ್ಳಾಲದಲ್ಲಿ ಕಡಲ ಅಬ್ಬರ ಹೆಚ್ಚಾಗಿದೆ. ನೋಡು ನೋಡುತ್ತಿದ್ದಂತೆ ಮನೆಗಳು ಸಮುದ್ರ ಪಾಲಾಗಿವೆ. ಕಡಲ ಅಲೆಗಳ ರಭಸಕ್ಕೆ ಮನೆ, ರೆಸಾರ್ಟ್ಗಳು ಕೊಚ್ಚಿ ಹೋಗಿವೆ. ಇನ್ನೂ ಹಲವು ಮನೆ ಸಮುದ್ರಪಾಲಾಗುವ ಭೀತಿಯಲ್ಲಿ ಜನರು ಇದ್ದಾರೆ. ಸಮುದ್ರ ತೀರದ ವಾಸಿಗಳು ಸಂಕಷ್ಟದಲ್ಲೇ ದಿನದೂಡುತ್ತಿದ್ದಾರೆ. ಮಂಗಳೂರು ಹೊರವಲಯದ ಉಳ್ಳಾಲ, ಉಚ್ಚಿಲ,ಸೋಮೇಶ್ವರ ಸಮುದ್ರಗಳಲ್ಲಿ ಕಡಲ ಅಲೆಗಳು ಹೆಚ್ಚಾಗುತ್ತಿವೆ. ಇಂದು ಮತ್ತೆ ಭಾರೀ ಮಳೆ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ಲಭಿಸಿದೆ. ಭಾರೀ ಅಲೆ ಹಿನ್ನೆಲೆ, ಅದೃಷ್ಟವಶಾತ್ ಜನರು ಈಗಾಗಲೇ ಮನೆಬಿಟ್ಟಿದ್ದರಿಂದ ಉಳಿದಿದೆ ಪ್ರಾಣ ಉಳಿದಿದೆ ಎನ್ನಲಾಗಿದೆ.
ಕಡಲ್ಕೊರೆತ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದಾರೆ. ಉಳ್ಳಾಲ, ಕೈಕೋ, ಉಚ್ಚಿಲಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದ್ದಾರೆ.
ಉಳ್ಳಾಲದಲ್ಲಿ ಅಲೆಗಳ ಏಟಿಗೆ ಉರುಳಿದ ಮನೆ, ರೆಸಾರ್ಟ್ ವೀಕ್ಷಿಸಿದ್ದಾರೆ. ಜೊತೆಗೆ ಮನೆ ಕಳೆದುಕೊಂಡವರ ಹಾಗೂ ಸಂಕಷ್ಟದಲ್ಲಿರುವವರ ಅಹವಾಲು ಸ್ವೀಕರಿಸಿದ್ದಾರೆ.
ಪೊಲೀಸ್ ಕಮಿಷನರ್ ಕೂಡ ಕಡಲ್ಕೊರೆತದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಮಂಗಳೂರು ಹೊರವಲಯದ ಉಳ್ಳಾಲ, ಕೈಕೋ, ಉಚ್ಚಿಲಕ್ಕೆ ಕಮೀಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಪೊಲೀಸರು ಸಹಾಯ ಹಸ್ತ ನೀಡಿದ್ದಾರೆ. ಕಮೀಷನರ್ ಜತೆ ಡಿಸಿಪಿ, ಎಸಿಸಿ, ಇನ್ಸ್‌ಪೆಕ್ಟರ್ ಸಹ ಭೇಟಿ ನೀಡಿದ್ದಾರೆ. ಮಂಗಳೂರು ನಗರ ಪ್ರದೇಶದಲ್ಲೂ ನೆರೆ ನೀರು ನಿಲ್ಲುವ ಪ್ರದೇಶ ಹಾಗೂ ಇತರೆಡೆಯೂ ಭೇಟಿ ನೀಡಿದ್ದಾರೆ. ಪೊಲೀಸ್ ಇಲಾಖೆಯಿಂದ ನೆರವು ಅಗತ್ಯವಿರುವ ಕಡೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.