ಬೆಂಗಳೂರು, ಜೂ.13- ದೇಶಾದ್ಯಂತ ಭಾರೀ ಸದ್ದು ಮಾಡಿರುವ ಐಎಂಎ ಜ್ಯುವೆಲ್ಸ್ ಸಂಸ್ಥೆ ಭವಿಷ್ಯದಲ್ಲಿ ಹೂಡಿಕೆದಾರರಿಗೆ ವಂಚನೆ ಮಾಡುವ ಸಾಧ್ಯತೆ ಇರುವುದರಿಂದ ಇದರ ಬಗ್ಗೆ ನಿಗಾ ವಹಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸೂಚನೆ ಕೊಟ್ಟಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿರುವ ಅಂಶ ಬೆಳಕಿಗೆ ಬಂದಿದೆ.
2015ರಲ್ಲೇ ಐಎಂಎ ವ್ಯಾಪಾರ -ವಹಿವಾಟು ಹಾಗೂ ಹೂಡಿಕೆದಾರರ ಮೇಲೆ ಕಣ್ಣಿಟ್ಟಿದ್ದ ಆರ್ಬಿಐ ಈ ಸಂಸ್ಥೆಯು ಹೂಡಿಕೆದಾರರಿಗೆ ಮುಂದೊಂದು ದಿನ ಮಕ್ಮಲ್ ಟೋಪಿ ಹಾಕಲಿದೆ. ಹೀಗಾಗಿ ಸಂಸ್ಥೆಯ ಚಲನ-ವಲನಗಳ ಬಗ್ಗೆ ಗಮನವಿಡಬೇಕೆಂದು ಸೂಚನೆ ಕೊಟ್ಟಿತ್ತು.
ಕೇವಲ ಸರ್ಕಾರಕ್ಕೆ ಮಾತ್ರವಲ್ಲದೆ ಪೊಲೀಸ್ ಇಲಾಖೆಗೂ ಕೂಡ ಖುದ್ದು ಆರ್ಬಿಐ ಮುಖ್ಯಸ್ಥನೇ ಪತ್ರ ಬರೆದು ಐಎಂಎ ನಡೆಸುತ್ತಿರುವ ವಹಿವಾಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇದರಲ್ಲಿ ಹವಾಲಾ ದಂಧೆ ನಡೆಯುತ್ತಿರುವುದರಿಂದ ಕ್ರಮ ಕೈಗೊಳ್ಳಬೇಕೆಂದು 2017ರಲ್ಲೇ ರಾಜ್ಯ ಗೃಹ ಕಾರ್ಯದರ್ಶಿ ಅಂದಿನ ಡಿಜಿಪಿ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಪತ್ರ ಬರೆದಿದ್ದರು.
ಆದರೆ, ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಐಎಂಎ ಕರ್ನಾಟಕ ಗ್ರಾಹಕರ ಹಿತರಕ್ಷಣೆ, ಹಣಕಾಸು ವಹಿವಾಟು ಕಾಯ್ದೆಯಡಿ ಬರುವುದಿಲ್ಲ ಎಂಬ ಸಬೂಬು ಹೇಳಿ ತನಿಖೆ ನಡೆಸದೆ ಕೈಬಿಟ್ಟಿತ್ತು.ಇದರ ಪರಿಣಾಮ ಇಂದು ಸಾವಿರಾರು ಜನರು ಹಣ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ.
ಒಂದು ಮೂಲದ ಪ್ರಕಾರ, ಐಎಂಎ ಸಂಸ್ಥೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಎಲ್ಲ ರೀತಿಯ ಸಿದ್ಧತೆ ಕೈಗೊಂಡಿತ್ತು. ಆದರೆ, ಅಂದು ಕೆಲವು ಕಾಣದ ಕೈಗಳ ಪ್ರಭಾವ ಆಡಳಿತ ಮುಖ್ಯಸ್ಥರ ಮೇಲೆ ಬೀರಿದ್ದರಿಂದ ನಾವು ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಆರ್ಬಿಐ ಪತ್ರ ಬರೆದಿದ್ದೂ ನಿಜ, ಐಎಂಎ ವಂಚನೆ ಮಾಡಲಿದೆ ಎಂಬ ಮುನ್ಸೂಚನೆ ನೀಡಿದ್ದೂ ನಿಜ. ನಾವು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದೆವು. ಆದರೆ, ಕೆಲವು ಪ್ರಭಾವಿಗಳ ಹಸ್ತಕ್ಷೇಪದಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಕರ್ನಾಟಕ ಗ್ರಾಹಕರ ಹಿತರಕ್ಷಣೆ, ಹಣಕಾಸು ವಹಿವಾಟು ಕಾಯ್ದೆಯಡಿ ಬರುವುದಿಲ್ಲ ಎಂದು ಹೇಳಿ ಕೈ ತೊಳೆದುಕೊಂಡೆವೆಂದು ಬಹಿರಂಗಪಡಿಸಿದ್ದಾರೆ.
ಐಎಂಎ ಮುಖ್ಯಸ್ಥ ಮಹಮ್ಮದ್ ಮನ್ಸೂರ್ಖಾನ್ ಕೇವಲ ಕರ್ನಾಟಕ ಮಾತ್ರವಲ್ಲದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೂಡಿಕೆದಾರರನ್ನು ಸೆಳೆಯಲು ಮುಂದಾಗಿದ್ದ. ಈತನ ಸಂಸ್ಥೆಯಲ್ಲಿ ಬೇನಾಮಿ ಹಾಗೂ ಹವಾಲಾ ದಂಧೆ ನಡೆಯುತ್ತಿರುವುದರ ಬಗ್ಗೆ ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ, ಐಟಿ ಕೂಡ ಸಂಶಯ ವ್ಯಕ್ತಪಡಿಸಿದ್ದವು.
ರಾಜ್ಯ ಸರ್ಕಾರವೇ ತನಿಖೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಐಎಂಎ ಕಾನೂನು ರಕ್ಷಣೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹಣ ಹೂಡಿಕೆ ಮಾಡಿದ್ದ ರಾಜಕಾರಣಿಗಳು ರಿಯಲ್ ಎಸ್ಟೇಟ್ ವಹಿವಾಟು ನಡೆಸುವ ದೊಡ್ಡ ದೊಡ್ಡ ಕುಳಗಳು ಬೆಂಗಾವಲಿಗೆ ನಿಂತ ಪರಿಣಾಮ ಏನೂ ಮಾಡಲು ಸಾಧ್ಯವಾಗಲಿಲ್ಲ. ಕಡೆ ಪಕ್ಷ ಅಂದೇ ನಾವು ಗಮನ ಹರಿಸಿದ್ದರೆ ಇಷ್ಟು ದೊಡ್ಡ ಮಟ್ಟದ ವಂಚನೆಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.