ಬೆಂಗಳೂರು, ಜೂ.13- ನಗರದ ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿರುವವರ ಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದ್ದು, ಅಂದಾಜಿನ ಪ್ರಕಾರ ಸುಮಾರು 25 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗುವ ಸಾಧ್ಯತೆಯಿದೆ.
ಕಳೆದ ಸೋಮವಾರ(ಜೂ.10) ಐಎಂಎ ಕಂಪನಿ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದಂತೆ ಅಂದು ಸಾವಿರಾರು ಸಂಖ್ಯೆಯಲ್ಲಿ ಹೂಡಿಕೆದಾರರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿ ತಮ್ಮ ಹಣ ಹಿಂದಿರುಗಿಸಿ ಎಂದು ಮನವಿ ಮಾಡಿದ್ದರು.
ಅಂದಿನಿಂದ ಪೊಲೀಸರು ಗ್ರಾಹಕರಿಂದ ದೂರು ಸ್ವೀಕರಿಸುವ ಸಲುವಾಗಿ ಕಮರ್ಷಿಯಲ್ ಸ್ಟ್ರೀಟ್ ವ್ಯಾಪ್ತಿಯ ಶಾಹಿದ್ ಮಹಲ್ನಲ್ಲೇ ಕುಳಿತು ದೂರು ಪಡೆದುಕೊಳ್ಳುತ್ತಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದಲೂ ಸಹ ಬಂದು ವಂಚನೆಗೊಳಗಾದ ಗ್ರಾಹಕರು ದೂರು ನೀಡುತ್ತಿದ್ದಾರೆ. ಶನಿವಾರದವರೆಗೂ ದೂರು ನೀಡಲು ಅವಕಾಶವಿದೆ. ವಂಚನೆಗೊಳಗಾದ ಗ್ರಾಹಕರು ಬಂದು ದೂರು ನೀಡಬಹುದಾಗಿದೆ.
ಒಟ್ಟಾರೆ ಬೆಂಗಳೂರಿನ ಹೆಚ್ಚಿನ ನಿವಾಸಿಗಳೇ ಹೆಚ್ಚು ಹಣ ಹೂಡಿಕೆ ಮಾಡಿರುವುದು ಕಂಡು ಬಂದಿದೆ.
ಅಲ್ಲದೆ ತಾವು ಹೂಡಿಕೆ ಮಾಡುವುದರ ಜೊತೆಗೆ ತಮ್ಮ ತಮ್ಮ ಸಮುದಾಯದ ಸ್ನೇಹಿತರು, ಸಂಬಂಧಿಕರ ಬಳಿಯೂ ಹೂಡಿಕೆ ಮಾಡಿಸಿದ್ದ ಹಲವಾರು ಕುಟುಂಬುದವರಿಂದ ಇದೀಗ ನಿಂದನೆಗೊಳಗಾಗಿರುವುದಾಗಿ ಹಲವು ಮಹಿಳೆಯರು ಕಣ್ಣೀರು ಹಾಕಿದ್ದಾರೆ.
ಈ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಹಲವರ ಪೈಕಿ ಮಧ್ಯಮ ವರ್ಗದ ಬಡ ಕುಟುಂಬದವರೇ ಹೆಚ್ಚಾಗಿದ್ದು , ಅವರುಗಳ ಅಳಲು ಹೇಳ ತೀರದಾಗಿದೆ.
ಒಬ್ಬೊಬ್ಬರ ಕತೆಯೂ ಕರುಣಾಜನಕವಾಗಿದೆ. ಈ ಪ್ರಕರಣದಲ್ಲಿ ಒಬ್ಬರು ಕಿಡ್ನಿದಾನ ಮಾಡಿದಾಗ ಬಂದಂತಹ ಹಣವನ್ನು ಹೂಡಿಕೆ ಮಾಡಿದ್ದರೆ, ಹಲವು ಮಹಿಳೆಯರು ಮನೆ ಕೆಲಸದಿಂದ ಬಂದಂತಹ ಹಣವನ್ನು ಈ ಕಂಪೆನಿಗೆ ತಂದು ಸುರಿದಿದ್ದಾರೆ.
ಮತ್ತೆ ಕೆಲವರು ಬ್ಯಾಂಕ್ಗಳಲ್ಲಿದ್ದಂತಹ ಹಣವನ್ನು ತಂದು ಹೆಚ್ಚಿನ ಹಣದ ಆಸೆಗಾಗಿ ಈ ಕಂಪೆನಿಯಲ್ಲಿ ಹೂಡಿಕೆ ಮಾಡಿ ಇದೀಗ ಇದ್ದ ಹಣವನ್ನೂ ಕಳೆದುಕೊಂಡು ನಿದ್ದೆ-ಊಟ ಮಾಡದೆ ಕಂಗಾಲಾಗಿ ಕಣ್ಣೀರು ಹಾಕುತ್ತಾ ಪ್ರತಿದಿನ ಚಿಂತಿಸುವಂತಾಗಿದೆ.
ಇನ್ನು ಹಲವರು ಯಾರದ್ದೋ ಮಾತು ಕೇಳಿ ಊರುಗಳಲ್ಲಿದ್ದಂತಹ ಜಮೀನು, ಹೊಲ, ಚಿನ್ನಾಭರಣ ಮಾರಿ ಬಂದಂತಹ ಹಣವನ್ನು ಐಎಂಎ ಜ್ಯುವೆಲ್ಸ್ನಲ್ಲಿ ಹೂಡಿಕೆ ಮಾಡಿದ್ದರೆ, ಹಲವರು ಮಕ್ಕಳ ಮದುವೆ, ವಿದ್ಯಾಭ್ಯಾಸದ ಖರ್ಚು-ವೆಚ್ಚಕ್ಕಾಗಿ ಮುಂದೊಂದು ದಿನ ನೆರವಿಗೆ ಬರುತ್ತದೆಂಬ ದೂರದೃಷ್ಟಿಯಿಂದ ಹೂಡಿಕೆ ಮಾಡಿರುವ ಹಣವನ್ನೆಲ್ಲ ಕಳೆದುಕೊಂಡು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.