ಬೆಂಗಳೂರು, ಜೂ.13- ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಆಗಮನದ ಪರಿಣಾಮ ಭರ್ಜರಿ ಮಳೆಯಾಗುತ್ತಿದ್ದರೆ, ಇತ್ತ ಇನ್ನೂ ಅನೇಕ ಕಡೆ ನೀರಿನ ಸಮಸ್ಯೆಯಿಂದಾಗಿ ಮಧ್ಯಾಹ್ನದ ಬಿಸಿಯೂಟವನ್ನೇ ನಿಲ್ಲಿಸಲಾಗಿದೆ.
ಹೈದರಾಬಾದ್ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಮುಂಬೈ ಕರ್ನಾಟಕದ ಹಾವೇರಿ, ಧಾರವಾಡ, ಉತ್ತರ ಕನ್ನಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆಯಾಗದ ಪರಿಣಾಮ ನೀರಿಗೆ ಪರದಾಡುವಂತಾಗಿದೆ.
ಈ ಭಾಗಗಳಲ್ಲಿ ನೀರಿನ ಹಾಹಾಕಾರ ಎಷ್ಟು ತೀವ್ರವಾಗಿದೆ ಎಂದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟದ ಮೇಲೂ ಪರಿಣಾಮ ಬೀರಿದೆ.
ಹೀಗಾಗಿ ಅನೇಕ ಕಡೆ ಬಿಸಿಯೂಟ ತಯಾರಿಸಲು ನೀರಿಲ್ಲದಿರುವುದರಿಂದ ಮಕ್ಕಳಿಗೆ ಊಟ ನೀಡಲು ಸಾಧ್ಯವಾಗುತ್ತಿಲ್ಲ. ಈ ಭಾಗಗಳಲ್ಲಿ 15 ದಿನಕ್ಕೆ ಒಂದು ಬಾರಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಒಬ್ಬರಿಗೆ ಹೆಚ್ಚೆಂದರೆ 8 ರಿಂದ 10 ಬಿಂದಿಗೆ ನೀರು ಸಿಗಬಹುದು.
ಮಕ್ಕಳಿಗೆ ಮಧ್ಯಾಹ್ನ ಅನ್ನ ಮತ್ತು ಸಾಂಬಾರು ತಯಾರಿಸಲು ನೀರು ಸಿಗದ ಕಾರಣ ಮಕ್ಕಳ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಎನ್ನುವಂತಾಗಿದೆ.
ಸ್ನಾನವೇ ಇಲ್ಲ: ಕುಡಿಯುವ ನೀರಿಗೆ ಹಾಹಾಕಾರ ಎದ್ದಿರುವುದರಿಂದ ಈ ಭಾಗದಲ್ಲಿ ಸ್ನಾನ ಎಂಬುದೇ ಮರೀಚಿಕೆಯಾಗಿದೆ. ಜಾನುವಾರುಗಳಿಗೆ ನೀರು ಪೂರೈಕೆ ಮಾಡುವುದು ಒಂದು ಕಡೆಯಾದರೆ, ಕುಡಿಯಲು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಇಂತಹ ಸಂದರ್ಭಗಳಲ್ಲಿ ಸ್ನಾನ ಮಾಡುವುದೆಂದರೆ ಕನಸಿನ ಮಾತು ಎಂಬಂತಾಗಿದೆ ಎಂದು ಸಾರ್ವಜನಿಕರೇ ಹೇಳಿಕೊಂಡಿದ್ದಾರೆ.
ಅಷ್ಟೋ ಇಷ್ಟೋ ನೀರು ಪೂರೈಕೆ ಮಾಡಿ ಮಧ್ಯಾಹ್ನದ ಬಿಸಿಯೂಟವನ್ನು ಪ್ರಾರಂಭದಲ್ಲಿ ತಯಾರಿಸುತ್ತಿದ್ದರು. ತಟ್ಟೆ ತೊಳೆಯಲು ಹೆಚ್ಚಿನ ನೀರು ಬೇಕಾಗುತ್ತದೆ ಎಂಬ ಕಾರಣಕ್ಕೆ ಮಕ್ಕಳಿಗೆ ಪ್ಲಾಸ್ಟಿಕ್ ತಟ್ಟೆಯಲ್ಲೇ ವಿತರಣೆ ಮಾಡಲಾಯಿತು. ಆದರೆ, ಸಂಪೂರ್ಣವಾಗಿ ನೀರಿನ ಸಮಸ್ಯೆ ಎದುರಾಗಿರುವುದರಿಂದ ಏನೂ ಮಾಡಲಾಗದ ಸ್ಥಿತಿಯಲ್ಲಿ ಶಿಕ್ಷಕರಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಅನೇಕ ಕಡೆ ಈಗಲೂ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳಿಗೆ ಪ್ಲಾಸ್ಟಿಕ್ ತಟ್ಟೆಯಲ್ಲೇ ನೀಡುತ್ತಿದ್ದಾರೆ. ಇದನ್ನು ಕೆಲವರು ಸ್ವಯಂಪ್ರೇರಿತರಾಗಿ ಖರೀದಿಸಿ ಶಾಲೆಗಳಿಗೆ ದಾನ ಮಾಡುತ್ತಿದ್ದಾರೆ.
ನಾವು ಮಕ್ಕಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಸಮಸ್ಯೆಯಿದ್ದರೂ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದೇವೆ. ಮಳೆ ಬಂದರೆ ಮಾತ್ರ ಈ ಸಮಸ್ಯೆಯನ್ನು ನಿವಾರಿಸಲು ಸಾಧ್ಯ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.