ಬೆಂಗಳೂರು, ಜೂ.13- ಬಳ್ಳಾರಿಯ ಜಿಂದಾಲ್ ಕಂಪೆನಿಗೆ ಮಾರಾಟ ಮಾಡಿರುವ ಜಮೀನನ್ನು ವಾಪಸ್ ಪಡೆಯುವುದು, ಐಎಂಎ ಹಗರಣವನ್ನು ಸಿಬಿಐಗೆ ವಹಿಸುವುದು ಹಾಗೂ ರೈತರ ಸಾಲ ಸಂಪೂರ್ಣ ಮನ್ನಾ ಸೇರಿದಂತೆ ರಾಜ್ಯ ಸರ್ಕಾರ ತಕ್ಷಣವೇ ಜನರ ಸಮಸ್ಯೆಗಳನ್ನು ಪರಿಹರಿಸದಿದ್ದರೆ ರಾಜ್ಯಾದ್ಯಂತ ಸಮ್ಮಿಶ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಎಚ್ಚರಿಸಿದೆ.
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ನಗರದ ಗಾಂಧಿ ಪ್ರತಿಮೆ ಬಳಿ ಯುವ ಮೋರ್ಚಾ ಪ್ರತಿಭಟನೆ ನಡೆಸಿದ ವೇಳೆ ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ತೀವ್ರ ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖಂಡರು ಇದೊಂದು ಕಮಿಷನ್ ಸರ್ಕಾರ. ಈ ಭ್ರಷ್ಟ ದೋಸ್ತಿ ಸರ್ಕಾರವನ್ನು ಕಿತ್ತೆಸೆಯದಿದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಕೂಡಲೇ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಆರ್.ಅಶೋಕ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿವರೆಗೂ ಪಾದಯಾತ್ರೆ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಜಿಂದಾಲ್ ಕಂಪೆನಿಗೆ 3.5 ಸಾವಿರ ಎಕರೆ ಭೂಮಿ ಮಾರಾಟವಾಗಿದ್ದರೂ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.
ಅಂದು ರಿಬೋಟ್ ಶೂ ಹಾಕಿಕೊಂಡು ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದ್ದವರಿಗೆ ಈಗ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಎಲ್ಲಿದ್ಯಪ್ಪ… ಎಂದು ಕುಹಕವಾಡಿದ ಅಶೋಕ್ ಕಮಿಷನ್ ಹೊಡೆಯಲು ಎರಡೂ ಪಕ್ಷದ ನಾಯಕರು ಜಿದ್ದಿಗೆ ಬಿದ್ದಿದ್ದಾರೆ. ಸರ್ಕಾರ ಎಷ್ಟು ದಿನ ಇರುತ್ತದೆಯೋ ಅಷ್ಟು ದಿನಗಳವರೆಗೂ ದೋಚಿಕೊಂಡು ಹೋಗಲು ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಐಎಂಎ ಪ್ರಕರಣದಲ್ಲಿ ಮಾಲೀಕ ಮಹಮ್ಮದ್ ಮನ್ಸೂರ್ ಅಲಿಖಾನ್ ಈಗಿನ ಮುಖ್ಯಮಂತ್ರಿ ಮತ್ತು ಹಿಂದಿನ ಮುಖ್ಯಮಂತ್ರಿ ಸೇರಿದಂತೆ ಅನೇಕರು ಬಿರಿಯಾನಿ ತಿಂದಿದ್ದಾರೆ. ಇದು ಬನ್ನೂರು ಕುರಿಯೋ, ರಾಯಚೂರು ಕುರಿಯೋ ಅಥವಾ ಮಾಗಡಿ ಕುರಿಯೋ ಎಂಬುದು ಬಹಿರಂಗವಾಗಲು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಎಸ್ಐಟಿಯಿಂದ ಯಾವ ಸತ್ಯಾಂಶವೂ ಹೊರಬರುವುದಿಲ್ಲ ಎಂದು ಹೇಳಿದರು.
ಜಮೀರ್ರನ್ನು ಬಂಧಿಸಲಿ: ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಐಎಂಎ ಪ್ರಕರಣದಲ್ಲಿ ಸಚಿವ ಜಮೀರ್ ಅಹಮ್ಮದ್ ನೇರವಾಗಿ ಭಾಗಿಯಾಗಿದ್ದಾರೆ.
ಅವರನ್ನು ರಕ್ಷಣೆ ಮಾಡಲು ಸರ್ಕಾರ ಎಸ್ಐಟಿ ರಚಿಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ತಾಕತ್ತಿದ್ದರೆ ಮೊದಲು ಜಮೀರ್ರನ್ನು ಬಂಧಿಸಲಿ ಎಂದು ಸವಾಲು ಹಾಕಿದರು.
ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮನ್ಸೂರ್ ಆಲಿಖಾನ್ ಜತೆ ಸಮ್ಮಿಶ್ರ ಸರ್ಕಾರದ ಅನೇಕರು ಸಂಪರ್ಕವಿಟ್ಟುಕೊಂಡಿದ್ದಾರೆ. ಎಸ್ಐಟಿ ರಚನೆ ಮಾಡಿರುವ ಉದ್ದೇಶವೇ ಕೆಲವರನ್ನು ರಕ್ಷಣೆ ಮಾಡುವುದಾಗಿದೆ.ಮೊದಲು ಜಮೀರ್ರನ್ನು ಬಂಧಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಸದ ತೇಜಸ್ವಿ ಸೂರ್ಯ, ಯುವಮೋರ್ಚಾ ಮುಖಂಡ ಸಪ್ತಗಿರಿಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ, ಮುಖಂಡರಾದ ತಮ್ಮೇಶ್ಗೌಡ ಮತ್ತಿತರರು ಪಾಲ್ಗೊಂಡಿದ್ದರು.