ಬೆಂಗಳೂರು,ಜೂ.13- ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ತಕ್ಷಣ ಅಗತ್ಯವಿರುವ ಜಮೀನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ಸೂಚಿಸಿದರು.
ವಿಧಾನಸೌಧದ ಜಿಲ್ಲಾಧಿಕಾರಿ ಮತ್ತು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ 2ನೆ ದಿನದ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಗದಿಪಡಿಸಿರುವ ಗುರಿ ತಲುಪಲು ಅನುಕೂಲವಾಗುವಂತೆ ಆಯಾ ಜಿಲ್ಲೆಗಳಲ್ಲಿ ಅಗತ್ಯ ಜಮೀನು ಗುರುತಿಸುವಂತೆ ನಿರ್ದೇಶನ ನೀಡಿದರು.
ದೇವರಾಜ ಅರಸು ವಸತಿ ಯೋಜನೆಯಡಿ ದಮನಿತರು, ಶೋಷಿತ ವರ್ಗದವರಿಗೆ ವಸತಿ ಸೌಲಭ್ಯ ಮಂಜೂರು ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಸೂಚಿಸಿದರು.
ನಿಗದಿಪಡಿಸಲಾಗಿರುವ 63,196 ಮನೆಗಳಲ್ಲಿ 32 ಸಾವಿರದ 75 ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸ್ವಯಂಸೇವಾ ಸಂಸ್ಥೆಗಳ ನೆರವಿನೊಂದಿಗೆ ಫಲಾನುಭವಿಗಳನ್ನು ಗುರುತಿಸಿ ಮನೆ ಹಂಚಿಕೆ ಮಾಡುವಂತೆ ನಿರ್ದೇಶಿಸಲಾಗುವುದು. ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೂ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳ ಅಭಿವೃದ್ದಿ ಯೋಜನೆಯಡಿ ಮಂಜೂರಾಗಿರುವ 4,080 ಕಾಮಗಾರಿಗಳಲ್ಲಿ ಈಗಾಗಲೇ 750 ಕಾಮಗಾರಿ ಪೂರ್ಣಗೊಂಡಿದ್ದು, 1939 ಕಾಮಗಾರಿಗಳು ಪ್ರಗತಿಯಲ್ಲಿವೆ. ಅವುಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಆದೇಶಿಸಿದರು.
ವಿವಿಧ ಜಿಲ್ಲೆಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಶೇ.75ರಷ್ಟು ಅನುದಾನ ಬಿಡುಗಡೆ ಮಾಡಲಾಗುವುದು. ಇದಕ್ಕೆ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಆದೇಶಿಸಿದರು.