ಬೆಂಗಳೂರು, ಜೂ.13- ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿರುವ ಸಾವಿರಾರು ಗ್ರಾಹಕರ ಸಾಲಿಗೆ ಕೋಲಾರ ಜಿಲ್ಲೆಯ ಕುಟುಂಬವೊಂದು ಸೇರಿದ್ದು, ಈ ಕುಟುಂಬ ಬರೋಬ್ಬರಿ 46 ಲಕ್ಷ ರೂ. ಹೂಡಿಕೆ ಮಾಡಿದ್ದಾಗಿ ಹೇಳಿಕೊಂಡಿದೆ.
ಮಾಲೂರು ತಾಲೂಕಿನ ಚಾಂದ್ಪಾಷ ಎಂಬ ಕುಟುಂಬದವರು 46 ಲಕ್ಷ ರೂ. ಹೂಡಿಕೆ ಮಾಡಲಾಗಿದೆ ಎಂದು ಇಂದು ಬೆಳಗ್ಗೆ ಬೆಂಗಳೂರಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಚಾಂದ್ಪಾಷ ಕುಟುಂಬ, ಇವರ ಅಳಿಯ ಸೇರಿ ಒಟ್ಟು 46 ಲಕ್ಷ ರೂ. ಹಣವನ್ನು ಐಎಂಎ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದು, ಇದೀಗ ಮಾಲೀಕ ನಾಪತ್ತೆಯಾಗಿರುವ ವಿಷಯ ತಿಳಿದು ಇಂದು ಬೆಂಗಳೂರಿಗೆ ಬಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ದೂರು ನೀಡಿದ್ದಾರೆ.
ನಮ್ಮ ಬಳಿ ಇದ್ದ ಆಭರಣವನ್ನು ಮಾರಿ ಬಂದ ಹಣಕ್ಕೆ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಸೇರಿಸಿ ಈ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದೆವು. ಇದೀಗ ಇದ್ದ ಹಣವನ್ನೆಲ್ಲ ಕಳೆದುಕೊಂಡು ಬೀದಿಗೆ ಬರುವಂತಾಗಿದೆ ಎಂದು ಕಣ್ಣೀರು ಹಾಕುತ್ತಿದ್ದರು.
ಪೊಲೀಸರು ಇವರ ದೂರನ್ನು ಸ್ವೀಕರಿಸಿ ಸಮಾಧಾನ ಹೇಳಿ ಕಳುಹಿಸಿದರು.