ಸಿಗ್ನಲ್ ಫ್ರೀ ಕಾರಿಡಾರ್ ಪರಿಶೀಲಿಸಿದ ಮೇಯರ್

ಮಹದೇವಪುರ, ಜೂ.12-ಮಹದೇವಪುರ ಕ್ಷೇತ್ರದ ಕುಂದಲಹಳ್ಳಿ ಜಂಕ್ಷನ್ ಬಳಿ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿಯನ್ನು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಸ್ಥಳೀಯ ಪಾಲಿಕೆ ಸದಸ್ಯೆ ಶ್ವೇತಾ ವಿಜಯ್‍ಕುಮಾರ್ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಮೇಯರ್ ಗಂಗಾಂಬಿಕೆ, ಸುಮಾರು 17 ಕಿ.ಮೀ ಸಿಗ್ನಲ್ ಪ್ರೀ ಕಾರಿಡಾರ್ ಕಾಮಗಾರಿ ನಡೆಯುತ್ತಿದ್ದು, ಇದರ ಮಧ್ಯೆ ಮೂರು ಅಂಡರ್‍ಪಾಸ್ ಜಂಕ್ಷನ್‍ಗಳು ಬರುತ್ತದೆ. ಈ ಮೂರು ಜಂಕ್ಷನ್‍ಗಳಲ್ಲೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ತಾವೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದರು.

ಸುಮಾರು 109 ಕೋಟಿ ವೆಚ್ಚದಲ್ಲಿ ಈ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಅಂಡರ್ ಪಾಸ್ ಬರುವ ಕಡೆ ಕಾಮಗಾರಿ ತಡ ಆಗಿದೆ. ಜಮೀನು ಒತ್ತುವರಿ ಮಾಡಿ ಕೆಲಸ ಮಾಡಬೇಕಿದೆ. ಕುಂದಲಹಳ್ಳಿಯಲ್ಲಿ 21 ಜಮೀನು ಒತ್ತುವರಿ ಮಾಡಿ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ಜಮೀನು ಮಾಲೀಕರು ಒಂದೇ ಬಾರಿ ಜಮೀನು ನೀಡಿದ್ದರೆ ಕಾಮಗಾರಿ ಈಗಾಗಲೇ ಮುಗಿಯುತ್ತಿತ್ತು.

ಟ್ರಾಫಿಕ್ ಡೈವರರ್ಶನ್ ಮಾಡಿ ಕಾಮಾಗಾರಿ ಮಾಡುತ್ತಿದ್ದೇವೆ. ಡಿಸೆಂಬರ್ ಒಳಗೆ ಕಾಮಗಾರಿ ಮುಗಿಸುತ್ತೇವೆ ಎಂದು ಮೇಯರ್ ಭರವಸೆ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯೆ ಶ್ವೇತಾವಿಜಯ್‍ಕುಮಾರ್ ಮಾತನಾಡಿ, ಕುಂದಲಹಳ್ಳಿ ಜಂಕ್ಷನ್ ಬಳಿ ನಡೆಯುತ್ತಿರುವ ಕಾಮಗಾರಿ ಮಾರ್ಚ್ ಒಳಗೆ ಕಾಮಗಾರಿ ಮುಗಿಯಬೇಕಿತ್ತು, ಆದರೆ ಇದುವರೆಗೂ ಆಗಲಿಲ್ಲ, ಸ್ಥಳೀಯ ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾವು ಉತ್ತರ ನೀಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಏಳುಗಂಟೆಗೆ ಶಾಲೆಗೆ ಹೋಗಬೇಕಿದ್ದ ಮಕ್ಕಳು ಬೆಳಗ್ಗೆ ಆರು ಗಂಟೆಗೆ ಎದ್ದು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಅಧಿಕಾರಿಗಳು ಜವಾಬ್ದಾರಿವಹಿಸಿಕೊಂಡು ಆದಷ್ಟು ಬೇಗ ಕಾಮಗಾರಿ ಬೇಗ ಮಾಡಿಕೊಡಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹೂಡಿ ವಿಜಯ್‍ಕುಮಾರ್, ವಾರ್ಡ್ ಅಧ್ಯಕ್ಷ ನಾಗಭೂಷಣ್, ನಂದಿಶ್, ಮುನಿರಾಜು, ರಮೇಶ್‍ರೆಡ್ಡಿ, ಭರತ್ ಸಂತೋಷ್, ಸತೀಶ್‍ರೆಡ್ಡಿ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ