
ಬೆಂಗಳೂರು, ಜೂ.12-ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಬಗ್ಗೆ ಕೆಲವು ಸಂಶಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರವನ್ನು ಮರು ಪರಿಶೀಲನೆ ಮಾಡಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ಜಿಂದಾಲ್ಗೆ ಜಮೀನು ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಆ ವಿಚಾರ ಮತ್ತೆ ಸಂಪುಟ ಸಭೆಯಲ್ಲೇ ಚರ್ಚೆಯಾಗಬೇಕು. ಸಂಪುಟ ಸಭೆ ಸುಪ್ರೀಂ ಆಗಿದೆ. ಅದರ ನಿರ್ಧಾರವೇ ಅಂತಿಮ ಆಗಲಿದೆ. ಜಿಂದಾಲ್ಗೆ ಜಮೀನು ನೀಡುವ ತೀರ್ಮಾನದ ವಿಚಾರದಲ್ಲಿ ಸಂಶಯಕ್ಕೆ ಎಡೆಮಾಡಿಕೊಡಬಾರದು ಎಂಬ ಉದ್ದೇಶದಿಂದ ಪುನರ್ ಪರಿಶೀಲನೆಗಾಗಿ ಮತ್ತೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಹಲವರು ಜಿಂದಾಲ್ಗೆ ಜಮೀನು ನೀಡುವ ವಿಷಯದಲ್ಲಿ ಕೆಲವೊಂದು ಸಂಶಯಗಳನ್ನು ವ್ಯಕ್ತಪಡಿಸಿದ್ದರು.
ಸಂಶಯಗಳನ್ನು ಅಂಕಿಅಂಶಗಳ ಸಹಿತ ನಿವಾರಣೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
2004-05, 2006-07ರಲ್ಲಿ ಲೀಸ್ ಕಮ್ ಸೇಲ್ ಮಾಡಲಾಗಿದೆ. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಗಿದೆ. ಇದರ ಬಗ್ಗೆ ಜನರಲ್ಲಿ ಸಂಶಯ, ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಅದರ ಪರಿಹಾರಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮುಂದಿನ ಸಚಿವ ಸಂಪಟು ಸಭೆ ಯಾವ ತೀರ್ಮಾನಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.