ಬೆಂಗಳೂರು,ಜೂ.12-ಮಗಳ ಮದುವೆಗೆಂದು ಐಎಂಎ ಜ್ಯುವೆಲ್ಸ್ನಲ್ಲಿ 5ಲಕ್ಷ ಹೂಡಿಕೆ ಮಾಡಿ ವಂಚನೆಗೊಳಗಾದ ಮಹಿಳೆಯನ್ನು ಪತಿಯೇ ಮನೆಯಿಂದ ಹೊರಹಾಕಿದ್ದಾನೆ.
ನಗೀನಾ ಅವರು ಪತಿಗೆ ಗೊತ್ತಿಲ್ಲದೆ ಐಎಂಎ ಜ್ಯುವೆಲ್ಸ್ನಲ್ಲಿ ಸ್ನೇಹಿತರ ಮಾತು ಕೇಳಿ 5 ಲಕ್ಷ ಹೂಡಿಕೆ ಮಾಡಿದ್ದರು. ಮಗಳ ಮದುವೆ ಮಾರ್ಚ್ನಲ್ಲಿ ನಿಶ್ಚಯವಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ ಲಾಭಾಂಶದ ಜೊತೆಗೆ ಹಣ ಹಿಂದಿರುಗಿಸುವುದಾಗಿ ಹೇಳಲಾಗಿತ್ತು.
ಇದೀಗ ಐಎಂಎ ಜ್ಯುವೆಲ್ಸ್ ಮಾಲೀಕ ನಾಪತ್ತೆಯಾಗಿದ್ದಾನೆಂಬ ಸುದ್ದಿ ಕೇಳಿ ನಗೀನಾ ಅವರು ಪತಿಗೆ ನಾನು ಸಹ 5 ಲಕ್ಷ ಹೂಡಿಕೆ ಮಾಡಿದ್ದೆ ಎಂದು ತಿಳಿಸಿದಾಗ, ದಂಪತಿ ನಡುವೆ ಜಗಳವಾಗಿ ನಗೀನಾ ಅವರನ್ನು ಪತಿ ಮನೆಯಿಂದ ಹೊರ ಹಾಕಿದ್ದಾನೆ.
ಇತ್ತ ಮಗಳ ಮದುವೆಗೆ ಹಣವಿಲ್ಲ ಎಂಬ ಆತಂಕದ ನಡುವೆಯೇ ಪತಿ ನನ್ನನ್ನು ಮನೆಯಿಂದ ಹೊರಹಾಕಿದ್ದಾನೆಂದು ನಗೀನಾ ದೂರು ನೀಡಲು ಬಂದ ಸಂದರ್ಭದಲ್ಲಿ ನೊಂದು ಕಣ್ಣೀರು ಹಾಕಿದ್ದಾರೆ.
ಇದೇ ರೀತಿ ಹಲವಾರು ಮಹಿಳೆಯರು ತಮ್ಮ ಮನೆಯವರಿಗೆ ಗೊತ್ತಿಲ್ಲದಂತೆ ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದು, ಇದೀಗ ಒಂದೊಂದೆ ಬೆಳಕಿಗೆ ಬರುತ್ತಿದೆ.
ಐಎಂಎ ಜ್ಯುವೆಲ್ಸ್ ಮಾಲೀಕ ನಾಪತ್ತೆಯಾದ ಸುದ್ದಿ ತಿಳಿದ ದಿವ್ಯಾಂಗ ಚೇತನ ಮೊಹಮ್ಮದ್ ಯಾಸೀರ್ ಎಂಬುವರು ತೆಲಾಂಗಣದಿಂದ ಬೆಂಗಳೂರಿಗೆ ಬಂದು ತಾನೂ ಸಹ ಈ ಕಂಪನಿಗೆ ಹಣ ಹೂಡಿಕೆ ಮಾಡಿದ್ದಾಗಿ ದೂರು ನೀಡಿದ್ದಾರೆ.
ಒಟ್ಟಾರೆ ಇಂದು ಸುಮಾರು 2500 ದೂರುಗಳು ದಾಖಲಾಗಿವೆ ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಿನ್ನೆ 11 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು.ಇಂದು ಬೆಳಗೆಯಿಂದಲೇ ವಂಚನೆಗೊಳಗಾದ ಗ್ರಾಹಕರು ವಿವಿಧ ದಾಖಲಾತಿಗಳೊಂದಿಗೆ ಬಂದು ಪೊಲೀಸರಿಗೆ ದೂರು ನೀಡುತಿದದ್ದು ಕಂಡುಬಂತು.