
ಬೆಂಗಳೂರು, ಜೂ.12-ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದಿಂದ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 180ಕ್ಕೂ ಹೆಚ್ಚು ನೌಕರರು ಈಗ ಅತಂತ್ರರಾಗಿದ್ದಾರೆ. ಅವರ ಎಲ್ಲಾ ದಾಖಲಾತಿಗಳು ಐಎಂಎ ಮಳಿಗೆ ಒಳಗೆ ಸಿಕ್ಕಿಹಾಕಿಕೊಂಡಿವೆ.
ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಬಳಿ ಇರುವ ಐಎಂಎ ಜ್ಯುವೆಲ್ಸ್ ನಲ್ಲಿ ಸುಮಾರು 180 ಮಂದಿ ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಅವರ ಎಲ್ಲಾ ವಿದ್ಯಾರ್ಹತೆಯ ಮೂಲ ದಾಖಲೆ ಪತ್ರಗಳು ಪ್ರಸ್ತುತ ನಾಪತ್ತೆಯಾಗಿರುವ ಮನ್ಸೂರ್ ಮಹಮ್ಮದ್ ಖಾನ್ ಬಳಿ ಇದೆ.
ಐಎಂಎ ಜ್ಯುವೆಲ್ಸ್ ಮಳಿಗೆಯನ್ನು ಸೀಜ್ ಮಾಡಲಾಗಿದೆ. ಆ ಮಳಿಗೆಯ ಒಳಗೆ ಇವರ ಎಲ್ಲಾ ದಾಖಲೆಗಳು ಇವೆ. ಈ ನೌಕರರನ್ನು ಮಾತನಾಡಿಸಿದರೆ, ನಮಗೆ ಎಲ್ಲಾ ರೀತಿಯಲ್ಲೂ ಒಳ್ಳೆ ಸಂಬಳ, ಸೌಕರ್ಯ ನೀಡುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಚಿನ್ನಾಭರಣ ಸರಬರಾಜು ಕಡಿಮೆಯಾಗಿತ್ತು. ಏಕೆ ಎಂದು ನಮಗೆ ಗೊತ್ತಾಗಲಿಲ್ಲ. ರಂಜಾನ್ ಹಬ್ಬಕ್ಕೆಂದು ರಜೆ ನೀಡಿದ್ದರು. ಏಕಾಏಕಿ ಈಗ ಬಂದ್ ಆಗಿದೆ. ಬಂದ್ ಆದರೂ ಪರವಾಗಿಲ್ಲ. ನಾವು ಬೇರೆ ಕಡೆ ಕೆಲಸವನ್ನು ನೋಡಿಕೊಂಡು ಬದುಕೋಣವೆಂದರೆ, ನಮ್ಮ ವಿದ್ಯಾರ್ಹತೆ ದಾಖಲೆಗಳು ಅವರ ಬಳಿ ಇದೆ. ಅವುಗಳನ್ನಾದರೂ ಕೊಟ್ಟರೆ ನಾವು ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಅಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಹೇಳುತ್ತಾರೆ.
ಸುಮಾರು 180ಕ್ಕೂ ಹೆಚ್ಚು ಜನ ಇಲ್ಲಿ ಕೆಲಸ ಮಾಡುತ್ತಿದ್ದೆವು. ಚೆನ್ನಾಗಿ ನಡೆಯುತ್ತಿತ್ತು. ಏನಾಯಿತೋ ನಮಗೆ ಗೊತ್ತಿಲ್ಲ. ಏಕಾಏಕಿ ಬಂದ್ ಆಗಿದೆ. ನಮ್ಮ ಪರಿಸ್ಥಿತಿ ಈ ರೀತಿ ಆಗಿದೆ. ಏನು ಮಾಡಬೇಕೆಂಬುದು ಗೊತ್ತಾಗುತ್ತಿಲ್ಲ ಎಂದು ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ, ನಿರ್ದೇಶಕರೂ ನಾಪತ್ತೆಯಾಗಿದ್ದಾರೆ. 500 ಕೋಟಿಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.12 ಸಾವಿರಕ್ಕೂ ಹೆಚ್ಚು ಜನ ಇದರ ವಿರುದ್ಧ ದೂರು ನೀಡಿದ್ದಾರೆ. ಇವರು ಎಲ್ಲಿದ್ದಾರೆ, ಯಾವ ವಂಚಿಸಿದ್ದಾರೆ, ಅಮಾಯಕರ ಹಣ ಹಿಂದಿರುಗಿಸುವ ಸಂಬಂಧ ಸರ್ಕಾರ ಪ್ರಕರಣವನ್ನು ಎಸ್ಐಟಿಗೆ ವಹಿಸಿದೆ. ಐಎಂಎಗೆ ಸಂಬಂಧಿಸಿದ ಮಳಿಗೆಗಳು, ಮೆಡಿಕಲ್ ಶಾಪ್ಗಳನ್ನು ಸೀಜ್ ಮಾಡಲಾಗಿದೆ.