ಬೆಂಗಳೂರು, ಜೂ.12-ನಗರದ ಬಹುಕೋಟಿ ವಂಚನೆ ಆರೋಪದ ಐಎಂಎ ಜ್ಯುವೆಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಐಜಿ ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ವಿಶೇಷ ತನಿಖಾ (ಎಸ್ಐಟಿ)ತಂಡವನ್ನು ರಚಿಸಲಾಗಿದೆ.
ಐಎಂಎ ಜ್ಯುವೆಲ್ಸ್ನ ವಂಚನೆ ಪ್ರಕರಣದ ತನಿಖೆ ನಡೆಸಲು ಎಸ್ಐಟಿ ತಂಡವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ರಚನೆ ಮಾಡಿದ್ದಾರೆ.
ರವಿಕಾಂತೇಗೌಡ ನೇತೃತ್ವದ ಎಸ್ಐಟಿ ತಂಡದಲ್ಲಿ ಡಿಸಿಪಿ (ಅಪರಾಧ) ಎಸ್.ಗಿರೀಶ್, ಸಿಸಿಬಿ ಎಸಿಪಿ ಬಾಲರಾಜು, ಸಿಐಡಿಯ ಡಿವೈಎಸ್ಪಿ ಕೆ.ರವಿಶಂಕರ್, ರಾಜ್ಯ ಗುಪ್ತಚರ ಇಲಾಖೆಯ ಡಿವೈಎಸ್ಪಿ ರಾಜಾ ಇಮಾಮ್ ಖಾಸಿಂ, ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಅಬ್ದುಲ್ ಖಾದರ್, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಸಿ.ಆರ್.ಗೀತ, ಎಲ್.ವೈ.ರಾಜೇಶ್, ಅಂಜನ್ಕುಮಾರ್, ಎನ್.ತನ್ವೀರ್ ಅಹಮ್ಮದ್, ಬಿ.ಕೆ.ಶೇಖರ್ ಅವರು ತಂಡದಲ್ಲಿದ್ದಾರೆ.
ಐಎಂಎ ಜ್ಯುವೆಲ್ಸ್ಗೆ ಸಂಬಂಧಿಸಿದ ತನಿಖೆಯ ಪ್ರಗತಿ ವರದಿಯನ್ನು ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಲು ಸೂಚಿಸಲಾಗಿದೆ.
ನಗರದ ಕಮರ್ಷಿಯಲ್ ಸ್ಟ್ರೀಟ್ನ ಪೊಲೀಸ್ ಠಾಣೆಯಲ್ಲಿ ಐಎಂಎ ಜ್ಯುವೆಲ್ಸ್ನ ವಂಚನೆ ಪ್ರಕರಣದ ಬಗ್ಗೆ ದೂರು ದಾಖಲಾಗಿದ್ದು, ಇದನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ವಹಿಸಲು ಸೂಚಿಸಿತ್ತು. ನಿನ್ನೆಯಷ್ಟೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಐಎಂಎ ಜ್ಯುವೆಲ್ಸ್ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸುವುದಾಗಿ ಹೇಳಿದ್ದರು. ಇಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದ ತನಿಖೆ ನಡೆಸಲು ಎಸ್ಐಟಿ ತನಿಖಾ ತಂಡವನ್ನು ರಚನೆ ಮಾಡಿದ್ದಾರೆ.