ಒಂದೇ ಕಂತಿನಲ್ಲಿ ಸಾಲಾಮನ್ನಾದ ಹಣ ಬಿಡುಗಡೆ

ಬೆಂಗಳೂರು, ಜೂ.12-ರೈತರ ಸಾಲಮನ್ನಾ ಮಾಡಿ ಚುನಾವಣೆ ಮುಗಿದ ಬಳಿಕವೇ ಹಣ ವಾಪಸ್ ಪಡೆಯಲಾಗಿದೆ ಎಂಬ ಸುಳ್ಳು ಆರೋಪವನ್ನು ತೊಡೆದುಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಸಾಲಮನ್ನಾದ ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರಿಗಳ ಸಭೆ ನಡೆಸಿ ಒಂದೇ ಕಂತಿನಲ್ಲಿ ಅರ್ಹ ಫಲಾನುಭವಿಗಳಿಗೆ ಸಾಲಮನ್ನಾದ ಬಾಕಿ ಹಣವನ್ನು ಬಿಡುಗಡೆ ಮಾಡುವ ಕುರಿತು ರೂಪುರೇಷೆಯನ್ನು ಸಿದ್ಧಪಡಿಸಿ ಸೂಚನೆ ನೀಡಿದ ಕೆಲ ಸಮಯದಲ್ಲೇ ಸರ್ಕಾರದ ಅಧಿಸೂಚನೆ ಕೂಡ ಹೊರಬಿದ್ದಿದೆ.

ನಿನ್ನೆ ಮಾಧ್ಯಮಗಳಲ್ಲಿ ಕೆಲವು ವರದಿಗಳು ಪ್ರಕಟಗೊಂಡಿದ್ದು, ಕೃಷಿ ಸಾಲವನ್ನು ಮನ್ನಾ ಮಾಡಿದ ಸರ್ಕಾರ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಸಾಲದ ಮೊತ್ತವನ್ನು ಹಿಂಪಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ರಾಜ್ಯ ಸರ್ಕಾರ ಈ ರೀತಿ ಯಾವುದೇ ಹಣವನ್ನು ಹಿಂಪಡೆದಿಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲದ ವರ್ಗೀಕರಣವನ್ನು ನಿರ್ಧರಿಸುವ ಸಂದರ್ಭದಲ್ಲಿ ಗೊಂದಲ ಉಂಟಾಗಿ ಬ್ಯಾಂಕ್‍ಗಳು ಹಣವನ್ನು ಮುಟುಗೋಲು ಹಾಕಿಕೊಂಡಿವೆ ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದರು.

ಗೊಂದಲಗಳೇನೆ ಇದ್ದರೂ ರೈತರಲ್ಲಿ ಮಾತ್ರ ಇದು ಭಾರೀ ಆತಂಕ ಮೂಡಿಸಿತ್ತು.ಅದರ ನಿವಾರಣೆಗೆ ಸಾಲದ ವರ್ಗೀಕರಣದ ಉಸಾಬರಿಯನ್ನೇ ಪಕ್ಕಕ್ಕಿಟ್ಟು ಒಂದೇ ಕಂತಿನಲ್ಲಿ ರಾಜ್ಯ ಸರ್ಕಾರ 59.48 ಕೋಟಿ ಹಣವನ್ನು ಬಿಡುಗಡೆ ಮಾಡುವ ಮೂಲಕ ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಒದಗಿಸಿದೆ.

ಬೆಳೆ ಸಾಲ ಯೋಜನೆ ಅರ್ಹತೆ ಹೊಂದಿರುವ ರಿಸ್ಟ್ರಿಕ್ಟೆಡ್ ಸಾಲಗಳು, ಓವರ್ ಡ್ಯೂ ಸಾಲಗಳು,  ಅರ್ಹತೆ ಹೊಂದಿರುವ ಸಾಲಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಬಿಡುಗಡೆಗೊಳಿಸಲಾದ ಮೊತ್ತವನ್ನು ಕಡಿತಗೊಳಿಸಿ ಉಳಿದ ಸಂಪೂರ್ಣ ಹಣವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದರ ಅನ್ವಯ ರಚನಾತ್ಮಕ ಸಾಲದ ಮೇಲೆ ಅರ್ಹತೆ ಪಡೆದಿರುವ 2,812 ಕೋಟಿ , ಮಿತಿ ಮೀರಿದ ಸಾಲದಲ್ಲಿ 3057 ಕೋಟಿ ಹಾಗೂ ಸಾಮಾನ್ಯ ಸಾಲದ ಮೇಲೆ 720 ಕೋಟಿ ರೂ.ಗಳನ್ನು ಇದರಲ್ಲಿ ಈಗಾಗಲೇ ಬಿಡುಗಡೆಗೊಳಿಸಲಾಗಿರುವ ಮೊತ್ತವನ್ನು ಕಡಿತಗೊಳಿಸಿ ಉಳಿದ ಸಂಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.

ಇದಲ್ಲದೆ ರೈತರು ಶೆಡ್ಯೂಲ್ ವಾಣಿಜ್ಯ ಬ್ಯಾಂಕ್‍ಗಳು ಹಾಗೂ ಪ್ರಾದೇಶಿಕ ಬ್ಯಾಂಕ್‍ಗಳಲ್ಲಿ ಪಡೆದಿರುವ ಬೆಳೆ ಸಾಲ ಮನ್ನಾ ಯೋಜನೆ 2018ರ ಸಂಪೂರ್ಣ ಮತ್ತು ಸಮರ್ಪಕ ಅನುಷ್ಠಾನಕ್ಕಾಗಿ ಮೇಲ್ವಿಚಾರಣೆ ನಡೆಸಲು ಆಯುಕ್ತರು ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆಯ ಅಧ್ಯಕ್ಷತೆಯಲ್ಲಿ ವಿಶೇಷ ಕೋಶವನ್ನು ಕೂಡ ರಚಿಸಲಾಗಿದೆ.

ಇದರ ನಡುವೆ ಎನ್‍ಪಿಎ ಸಾಲಗಳ ಬಗ್ಗೆ 1.1.2018ರಿಂದ ಬಡ್ಡಿ ಮೊತ್ತ ಪಾವತಿಸುವ ಬಗ್ಗೆ ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಸಾಲ ವರ್ಗೀಕರ ವಿಷಯದಲ್ಲಿ ಗೊಂದಲದಲ್ಲಿ 13,123 ರೈತರು ನಿರಾಳರಾಗಿದ್ದಾರೆ. 21 ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ 59,48,62,046.4 ರೂ.ಗಳನ್ನು ರಾಜ್ಯ ಸರ್ಕಾರ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ