ಲಖನೌ: ತೃತೀಯ ಲಿಂಗಿ ಸಮುದಾಯದ ಕೆಲ ಸದಸ್ಯರ ಮೇಲೆ ಪೊಲೀಸ್ ಠಾಣಾ ಆವರಣದಲ್ಲಿಯೇ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಲಾಲ್ ಕುರ್ತಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಎರಡು ಗುಂಪಿನ ತೃತೀಯ ಲಿಂಗಿ ಸಮುದಾಯದವರು ಮೀರತ್ನ ಫವ್ವಾರ ಚೌಕದ ಸಮೀಪವಿರುವ ಮನೆಯೊಂದರ ಕುಟುಂಬಕ್ಕೆ ಶುಭಕೋರಲು ಹೋಗಿದ್ದಾಗ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ಥಳೀಯರೊಬ್ಬರು ಪೊಲೀಸರಿಗೆ ಕರೆ ಮಾಡಿ ಗಲಾಟೆ ಕುರಿತು ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಠಾಣೆಯನ್ನು ತಲುಪುತ್ತಿದ್ದಂತೆ ಎರಡು ಗುಂಪುಗಳು ಇನ್ನಷ್ಟು ಗದ್ದಲ ಆರಂಭಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ತೃತೀಯಲಿಂಗಿಗಳ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಎರಡು ಗುಂಪಿನವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ, ತೃತೀಯ ಲಿಂಗಿಗಳು ಅನುಚಿತವಾಗಿ ವರ್ತನೆ ಮಾಡಿದರು. ಅವರನ್ನು ನಿಯಂತ್ರಣ ಮಾಡಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಒಂದು ವೇಳೆ ಅಗತ್ಯಕ್ಕಿಂತ ಹೆಚ್ಚಾಗಿ ಅವರ ವಿರುದ್ಧ ಲಾಠಿಚಾರ್ಜ್ ಮಾಡಿದ್ದರೆ, ತನಿಖೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
Transgenders Lathi-charged in Meerut After Two Groups Create Fracas in Police Station