ಸುಮಾರು 3000ಎಕರೆಗೂ ಹೆಚ್ಚಿನ ಭೂಮಿಯನ್ನು ಶುದ್ಧ ಕ್ರಯ ಪತ್ರದ ಮೂಲಕ ಜಿಂದಾಲ್ ಗೆ ಸೇಲ್ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ.
ಈ ಕುರಿತಾದ ರೂಪುರೇಷೆಯನ್ನು ಇಂದು ಮಾಜಿ ಉಪಮುಖ್ಯಮಂತ್ರಿಗಳಾದ ಆರ್. ಅಶೋಕ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಬಿಜೆಪಿ ಘಟಕ ಜೂನ್ 16 ರ ಬೆಳಗ್ಗೆ 11 ಗಂಟೆಗೆ ಮಾನ್ಯ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಎಲ್ಲಾ ಶಾಸಕರು ಹಾಗೂ ಲೋಕಸಭಾ ಸದಸ್ಯರ ಬೆಂಬಲದೊಂದಿಗೆ ಅಹೋರಾತ್ರಿ ಧರಣಿ ನಡೆಸಲಿದೆ. ಒಂದು ವೇಳೆ ಸರ್ಕಾರ ಇದಕ್ಕೂ ಜಗ್ಗದಿದ್ದಲ್ಲಿ ಎರಡು ದಿನಗಳ ನಂತರದಲ್ಲಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದೊಂದು ತುರ್ತು ನಿಗಾ ಘಟಕದಲ್ಲಿರುವ ಸರ್ಕಾರವಾಗಿದ್ದು ಹಣದ ಅಗತ್ಯತೆ ಹೆಚ್ಚಿದೆಯೇನೋ ಎಂಬಂತೆ ಜಮೀನಿನ ಗುತ್ತಿಗೆಯ ಅವಧಿಯನ್ನು ವಿಸ್ತರಿಸಲು ಅವಕಾಶವಿದ್ದರೂ ಮಾರಾಟಕ್ಕೆ ಮುಂದಾಗಿದೆ ಎನ್ನುವ ಮೂಲಕ ಸರ್ಕಾರದ ಇಂದಿನ ಪರಿಸ್ಥಿಯನ್ನು ಟೀಕಿಸಿದರು.
1995 ರಿಂದ 2008 ರವರೆಗೂ ಸುಮಾರು 11600 ಎಕರೆ ಭೂಮಿ ಜಿಂದಾಲ್ ವಶದಲ್ಲಿದ್ದು, ಕೇವಲ ಗಣಿಗಾರಿಕೆಗಾಗಿ ಅನುಮತಿ ಪಡೆದ ಕಂಪನಿ ಇಂದು ಡಾಂಬರಿಕರಣ ಸೇರಿದಂತೆ ವಿವಿಧ ಪ್ರಕೃತಿ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ, ಡಾಂಬರಿಕರಣಕ್ಕೆ ಮಹಾರಾಷ್ಟ್ರದಲ್ಲಿ ಪರಿಸರ ಕಾಳಜಿಯುಳ್ಳ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರಾರಂಭಗೊಂಡಿದ್ದು ಇದು ಪರಿಸರಕ್ಕೆ ಹಾನಿಕಾರಕ ಎಂದು ಆತಂಕ ವ್ಯಕ್ತಪಡಿಸಿದರು. ಜಿಂದಾಲ್ ಗಾಗಿ ನಿಮ್ಮ ರಾಜಕೀಯ ಜಿಂದಗಿಯನ್ನು ಬಲಿಕೊಡಬೇಡಿ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸರ್ಕಾರದ ಸೂಪರ್ ಮ್ಯಾನ್ ಎಂದು ಅಣಕಿಸುತ್ತ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಹಿಂದೊಮ್ಮೆ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದವರು ಈಗೇಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ಕೆಲ ಮಾಧ್ಯಮಗಳ ಕುರಿತಂತೆ ಮುಖ್ಯಮಂತ್ರಿಗಳ ವರ್ತನೆ ಹಾಗೂ ಕೆಲವು ನಿರ್ಧಾರಗಳಿಗೆ ಸಂಬಂಧಿಸಿದಂತೆ ದೇಶದಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹರಣವಾಗಿದೆ ಎಂದು ಪ್ರತಿಭಟಿಸಿದ್ದ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ಬಂದ ವ್ಯಕ್ತಿಗೆ ಈ ರೀತಿಯ ವರ್ತನೆ ಶೋಭೆ ತರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಬಿಬಿಎಂಪಿ ಸದಸ್ಯರು ಮತ್ತು ಬೆಂಗಳೂರು ನಗರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಜಿಂದಾಲ್ ಕಂಪನಿಗೆ ಭಾರೀ ಪ್ರಮಾಣದಲ್ಲಿ ಜಮೀನು ನೀಡುವ ಪ್ರಕರಣದಲ್ಲಿ ಮೈತ್ರಿ ಸರ್ಕಾರದ ಅಕ್ರಮ ಖಂಡಿಸಿ ಜೂನ್ 13ರಿಂದ ನಡೆಯಲಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ತಯಾರಿ ಸಲುವಾಗಿ ಮಾಜೀ ಉಪಮುಖ್ಯಮಂತ್ರಿ ಶ್ರೀ ಆರ್. ಅಶೋಕ್ ಮತ್ತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಎನ್.ರವಿಕುಮಾರ್ ಅವರು ಬಿಬಿಎಂಪಿ ಸದಸ್ಯರು ಮತ್ತು ಬೆಂಗಳೂರು ನಗರ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.