ಬೆಂಗಳೂರು, ಜೂ.11-ನಗರದ ಐಎಂಎ ಜ್ಯುವೆಲ್ಸ್ನ ವಂಚನೆ ಆರೋಪದ ಪ್ರಕರಣವನ್ನು ವಿಶೇಷ ತನಿಖಾ ತಂಡದ ತನಿಖೆಗೆ ವಹಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದರು.
ಅಲ್ಪಸಂಖ್ಯಾತರ ಮುಖಂಡರೊಂದಿಗೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿ ಐಎಂಎ ಜ್ಯುವೆಲ್ಸ್ ವಂಚನೆ ಆರೋಪದ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಬೇಕು, ಇಲ್ಲವೆ ಸಿಬಿಐ ತನಿಖೆಗಾದರೂ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಐಎಂಎ ಜ್ಯುವೆಲ್ಸ್ನಲ್ಲಿ ಹೂಡಿಕೆ ಮಾಡಿದ್ದ ಹಲವು ಮಂದಿ ಬೀದಿಗೆ ಬರುವಂತಾಗಿದೆ. ಅದರ ಹಿಂದೆ ಎಂತ ದೊಡ್ಡ ವ್ಯಕ್ತಿಯಿದ್ದರೂ ಕ್ರಮ ಕೈಗೊಳ್ಳಬೇಕು.
ಜ್ಯುವೆಲ್ಸ್ನ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹೂಡಿಕೆದಾರರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರಲ್ಲದೆ, ಆರ್ಥಿಕ ಅಪರಾಧ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದರು.
ಹಿರಿಯ ಅಧಿಕಾರಿಗಳ ಸಭೆ:
ಐಎಂಎ ಜ್ಯುವೆಲ್ಸ್ನ ವಂಚನೆ ಆರೋಪ ಬೆಳಕಿಗೆ ಬಂದ ಬೆನ್ನಲ್ಲೇ ಆರ್ಥಿಕ ಅಪರಾಧ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರನ್ನು ಒಳಗೊಂಡ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಾಲೋಚನೆ ನಡೆಸಿದ್ದಾರೆ.