ಬೆಂಗಳೂರು,ಜೂ.10- ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜೀಯಾಗುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನದ ಗೌರವಾರ್ಥ, ಇಂದು ನಡೆಯಬೇಕಿದ್ದ ಜಲಸಂಪನ್ಮೂಲ-ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆಯನ್ನು ಮುಂದೂಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾವುದೇ ಒತ್ತಡ ಏನೇ ಇದ್ದರೂ ಗುಣಮಟ್ಟದ ವಿಚಾರದಲ್ಲಿ ರಾಜೀ ಆಗುವುದಿಲ್ಲ. ರಸ್ತೆ, ಕಾಲುವೆ ಸೇರಿದಂತೆ ಪ್ರತಿ ಕಾಮಗಾರಿಯ ಮಾಹಿತಿಯೊಂದಿಗೆ ನಾಳೆ ನಡೆಯುವ ಸಭೆಗೆ ಇಲಾಖೆಯ ಎಲ್ಲಾ ಅಧಿಕಾರಿಗಳು ಬರಬೇಕು ಎಂದರು.
ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಿ ನಿರ್ದೇಶನ ನೀಡಲು ಸಭೆ ಕರೆಯಲಾಗಿದೆ. ಭೂಸ್ವಾಧೀನದ ವಿಚಾರ, ಕಾರ್ಯ ನಿರ್ವಾಹಕ ಇಂಜಿನಿಯರ್, ಅಧೀಕ್ಷಕ ಇಂಜಿನಿಯರ್, ಮುಖ್ಯ ಇಂಜಿನಿಯರ್ಗಳು ಸೇರಿದಂತೆ ಯಾರ್ಯಾರು ಏನೇನು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇರಬೇಕು. ಆರ್ಥಿಕ ಶಿಸ್ತನ್ನು ಪಾಲನೆ ಮಾಡಬೇಕಿದೆ.
ಸಂಬಂಧಿಸಿದ ಇಲಾಖೆಯ ಕಾರ್ಯದರ್ಶಿ, ವ್ಯವಸ್ಥಾಪ ನಿರ್ದೇಶಕರುಗಳು ಇಂಜಿನಿಯರ್ಗಳ ವಾಹನಗಳ ಚಲನವಲನಗಳ ಬಗ್ಗೆಯೂ ನಿಗಾ ವಹಿಸಬೇಕೆಂದು ಎಂದು ಹೇಳಿದರು.