ಬೆಂಗಳೂರು, ಜೂ.10- ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಸ್ ಪರೀಕ್ಷೆಯ ಸಂದರ್ಶನ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಇಂದು ಕರೆ ನೀಡಲಾಗಿದ್ದ ಪ್ರತಿಭಟನೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ.
ಬಿಜೆಪಿ ಶಾಸಕರಾದ ಸುರೇಶ್ಕುಮಾರ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಕೆಪಿಎಸ್ಸಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ಶೋಕಾಚರಣೆ ಘೋಷಣೆ ಮಾಡಿ ಸರ್ಕಾರಿ ಕಚೇರಿಗಳಿಗೆ ರಜೆ ನೀಡಿದ್ದರಿಂದ ಕೆಪಿಎಸ್ಸಿ ಕಚೇರಿಯ ಎಲ್ಲಾ ಸಿಬ್ಬಂದಿಗಳು ಮನೆ ಹೊರಡುವ ತರಾತುರಿಯಲ್ಲಿದ್ದರು.
ಪ್ರತಿಭಟನೆ ಮಾಡಲು ಹೋದ ಸುರೇಶ್ಕುಮಾರ್ ಅವರು ಕಚೇರಿ ಸಿಬ್ಬಂದಿ ಹೊರ ಹೋಗುತ್ತಿರುವುದನ್ನು ಗಮನಿಸಿ ಇಂದಿನ ಪ್ರತಿಭಟನೆಯನ್ನು ಬುಧವಾರಕ್ಕೆ ಮುಂದೂಡುವುದಾಗಿ ಘೋಷಿಸಿದರು.
2015ನೇ ಸಾಲಿನ ಕೆಎಎಸ್ ಪರೀಕ್ಷೆಗಾಗಿ 2017ರ ಮೇ 12 ರಂದು ಅಧಿಸೂಚನೆ ಪ್ರಕಟಿಸಲಾಗಿದೆ. ಆಗಸ್ಟ್ 18 ರಂದು ಪೂರ್ವಭಾವಿ ಪರೀಕ್ಷೆಗಳು ನಡೆದು ಡಿ.22ಕ್ಕೆ ಮುಖ್ಯ ಪರೀಕ್ಷೆಗಳು ಪೂರ್ಣಗೊಂಡಿವೆ. ಆದರೆ ಫಲಿತಾಂಶಗಳು ಆ ವರ್ಷ ಪ್ರಕಟಗೊಳ್ಳಲಿಲ್ಲ.
2018ರ ಆಗಸ್ಟ್ ತಿಂಗಳಿನಲ್ಲಿ ತಾವು ಆಯೋಗದ ಅಧ್ಯಕ್ಷರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಹಾಗೂ ಇತರರೊಡನೆ ಸಮಾಲೋಚನೆ ನಡೆಸಿ ನಿರಂತರ ಪ್ರಯತ್ನ ಮಾಡಿದ್ದೆ.ನವೆಂಬರ್ನಲ್ಲಿ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದೆ.ಅನೇಕ ಬಾರಿ ಭರವಸೆಗಳು ಸಿಕ್ಕವು, ದಿನಾಂಕಗಳು ನಿಗದಿಯಾದವು. ಆದರೆ ಫಲಿತಾಂಶ ಬಂದಿರಲಿಲ್ಲ ಎಂದು ಸುರೇಶ್ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಸತತ ಪ್ರಯತ್ನದ ಫಲವಾಗಿ 2019ರ ಜ.28ರಂದು ಫಲಿತಾಂಶ ಪ್ರಕಟವಾಗಿದೆ. ಆದರೆ ಮುಂದಿನ ಹಂತದ ಸಂದರ್ಶನಗಳನ್ನು 6 ತಿಂಗಳಾದರೂ ಕರೆದಿಲ್ಲ. ಮೊದಲು ನೀತಿಸಂಹಿತೆಯ ನೆಪವನ್ನು ಹೇಳಲಾಗುತ್ತಿತ್ತು. ಈಗ ಚುನಾವಣೆ ಮುಗಿದು ಫಲಿತಾಂಶವೂ ಪ್ರಕಟಗೊಂಡಿದೆ.ಆದರೂ ಇನ್ನು ಸಂದರ್ಶನದ ವೇಳಾಪಟ್ಟಿ ಪ್ರಕಟಗೊಂಡಿಲ್ಲ. ಇದರಿಂದ ಅಭ್ಯರ್ಥಿಗಳಲ್ಲಿ ಆತಂಕ, ಹತಾಶೆ ಎದುರಾಗಿದೆ.ಅಭ್ಯರ್ಥಿಗಳ ಜೊತೆಗೂಡಿ ಬುಧವಾರ ಪ್ರತಿಭಟನೆಯನ್ನು ನಡೆಸುವುದಾಗಿ ಅವರು ತಿಳಿಸಿದರು.