ಬೆಂಗಳೂರು, ಜೂ.10-ಯಾವುದೇ ಕಾರಣಕ್ಕೂ ಬಳ್ಳಾರಿಯ ಜಿಂದಾಲ್ ಅದಿರು ಮತ್ತು ಉಕ್ಕಿನ ಕಾರ್ಖಾನೆಗೆ ಬೆಲೆಬಾಳುವ ಜಮೀನು ನೀಡಲು ಅವಕಾಶ ನೀಡುವುದಿಲ್ಲ. ಇದಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕೆಲ ಸಚಿವರು ಜಿಂದಾಲ್ ಕಂಪನಿಯಿಂದ ಕಿಕ್‍ಬ್ಯಾಕ್ ಪಡೆದುಕೊಂಡು ಜಮೀನು ನೀಡಲು ಹೊರಟಿದ್ದಾರೆ ಎಂದು ದೂರಿದರು.
ಯಾವುದೇ ಕಾರಣಕ್ಕೂ ಬೆಲೆ ಬಾಳುವ ಜಮೀನನ್ನು ಜಿಂದಾಲ್‍ಗೆ ಕೊಡಲು ಬಿಡುವುದಿಲ್ಲ. ಇದೇ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೆವು.ಗಿರೀಶ್ ಕಾರ್ನಾಡ್‍ರವರ ನಿಧನದ ಹಿನ್ನಲೆಯಲ್ಲಿ ಮುಂದೂಡಲಾಗಿದೆ ಎಂದು ತಿಳಿಸಿದರು.
ಜೂ.14 ರಿಂದ 16ರವರೆಗೆ ಮೂರು ದಿನಗಳ ಕಾಲ ಅಹೋರಾತ್ರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ. ಇದರಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಂತಾಪ:
ಇಂದು ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಗಿರೀಶ್ ಕಾರ್ನಾಡ್ ನಿಧನಕ್ಕೆ ಯಡಿಯೂರಪ್ಪ ಇದೇವೇಳೆ ಸಂತಾಪ ವ್ಯಕ್ತಪಡಿಸಿದರು.ನಟರಾಗಿ, ಸಾಹಿತಿಗಳಾಗಿ ತಮ್ಮದೇ ಪ್ರತಿಭೆ ಮೂಲಕ ನಾಡು ಮತ್ತು ರಾಷ್ಟ್ರಕ್ಕೆ ಕೊಡುಗೆ ನೀಡಿದ್ದಾರೆ.ಅವರ ನಿಧನ ತುಂಬಲಾರದ ನಷ್ಟ ಎಂದು ವಿಷಾದಿಸಿದರು.