ಬೆಂಗಳೂರು,ಜೂ.10-ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಇಂದು ಟೌನ್ಹಾಲ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಪಬ್ಲಿಕ್ ಶಾಲೆಗಳಲ್ಲಿ ಷರತ್ತುಗಳಿಗೊಳಪಟ್ಟು ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ 11 ಷರತ್ತುಗಳನ್ನು ಆದೇಶವನ್ನು ವಿಧಿಸಿರುವುದು ಸೂಕ್ತವಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.
ಇದರ ಬದಲು ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಪಾಲನಾ ಕೇಂದ್ರವನ್ನಾಗಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಪ್ರತಿ ಗ್ರಾಮಗಳಲ್ಲೂ ಶಿಶುಪಾಲನ ಕೇಂದ್ರಗಳನ್ನು ತೆರೆಯಬೇಕು.ಆ ಕೇಂದ್ರಗಳಲ್ಲಿ ಮೂರುವರೆ ವರ್ಷದೊಳಗಿನ ಮಕ್ಕಳು ಪ್ರವೇಶ ಪಡೆಯಬೇಕು.
ಶಿಶುಪಾಲನಾ ಕೇಂದ್ರಗಳಿಗೆ ತರಬೇತಿ ಪಡೆದ ಶಿಕ್ಷಕಿ ಹಾಗೂ ಓರ್ವ ಸಹಾಯಕರನ್ನು ನೇಮಕ ಮಾಡುವ ಜೊತೆಗೆ ಆರೋಗ್ಯ ಕಾರ್ಯಕರ್ತೆಯರ ಗೌರವಧನ ಸಕಾಲಕ್ಕೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಪ್ರಮುಖ ಬೇಡಿಕೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಅಧ್ಯಕ್ಷ ಜಿ.ಆರ್.ಶಿವಶಂಕರ್ ತಿಳಿಸಿದರು.
ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ ಜಾರಿಗೆ ತರಬೇಕು.ಪೂರ್ವ ಪ್ರಾಥಮಿಕ ಶಿಕ್ಷಕರ ತರಬೇತಿ ಮತ್ತು ನರ್ಸರಿ ತರಬೇತಿ ಪಡೆದು ಅಂಗನವಾಡಿ ಕೇಂದ್ರಗಳಲ್ಲಿ ದುಡಿಯುತ್ತಿರುವ ಕಾರ್ಯಕರ್ತೆಯರನ್ನು ಯಾವುದೇ ಪೂರ್ವ ಷರತ್ತಿಲ್ಲದೆ ಖಾಯಂ ಶಿಕ್ಷಕಿಯರನ್ನಾಗಿ ನೇಮಕ ಮಾಡಬೇಕು.
10ನೇ ತರಗತಿ ಉತ್ತೀರ್ಣರಾದ ಕಾರ್ಯಕರ್ತೆಯರಿಗೆ ಸರ್ಕಾರವೇ ನರ್ಸರಿ ಶಿಕ್ಷಕರ ತರಬೇತಿ ಕೊಡಿಸಿ ಅವರನ್ನು ಪೂರ್ವ ಪ್ರಾಥಮಿಕ ವಿಭಾಗಕ್ಕೆ ಶಿಕ್ಷಕಿಯರನ್ನಾಗಿ ನೇಮಕ ಮಾಡಬೇಕು. ನಿವೃತ್ತಿ ಹೊಂದಿರುವ ಕಾರ್ಯಕರ್ತೆಯರಿಗೆ ಸರ್ಕಾರ ಕೂಡಲೇ ನಿವೃತ್ತಿ ವೇತನ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಾಮಂಡಳಿ ಪದಾಧಿಕಾರಿಗಳಾದ ಪಾರ್ವತಿ.ಎಸ್ ಮರಿಗೌಡರ್, ನಾಗರತ್ನಮ್ಮ, ಯಶೋಧ, ಸರಸ್ವತಮ್ಮ, ಪದ್ಮಾವತಿ ಮತ್ತಿತರರು ಪಾಲ್ಗೊಂಡಿದ್ದರು.