ನವದೆಹಲಿ: ವಿಶ್ವದ ಎತ್ತರದ ಯುದ್ಧ ಭೂಮಿ ಎಂದು ಹೆಸರಾಗಿರುವ ಸಿಯಾಚಿನ್ ಹಿಮನದಿಯಲ್ಲಿ ಯೋಧರು ಆಹಾರಕ್ಕಾಗಿ ಪರದಾಡುವ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿಯಾಚಿನ್ ಹಿಮನದಿ ಪ್ರದೇಶಕ್ಕೆ ಪೋಸ್ಟಿಂಗ್ ಆಗಿರುವ ಯೋಧರು ಮಾತ್ರ ಇದೆಲ್ಲವನ್ನು ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಿರುತ್ತಾರೆ. ಯುದ್ಧದಲ್ಲಿ ಹೋರಾಡಿದಂತೆಯೇ ಹಿಮದಿಂದ ರಕ್ಷಿಸಿಕೊಳ್ಳುವುದು, ಆಹಾರ ಸೇವಿಸುವುದು ಕೂಡ ಸವಾಲಿನ ಕೆಲಸವೇ ಸರಿ.
ಸಿಯಾಚಿನ್ನಲ್ಲಿ ನಿಯೋಜಿತರಾಗಿರುವ ಯೋಧರು ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಯೋಧರ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ವಿಡಿಯೋದಲ್ಲಿ ಮೂವರು ಯೋಧರು ಚಾಕು ಮತ್ತು ಸುತ್ತಿಗೆಯನ್ನು ಹಿಡಿದು ಆಹಾರ ಸೇವನೆಗೆ ಪಡಬೇಕಾದ ಕಷ್ಟಕರ ವಿಧಾನವನ್ನು ತೋರಿಸುತ್ತಾರೆ. ರಿಯಲ್ ಫ್ರೂಟ್ ಜ್ಯೂಸ್ ಪೊಟ್ಟಣವನ್ನು ಒಡೆದರೆ ಅದು ಐಸ್ಕ್ಯೂಬ್ ಆಗಿ ಪರಿವರ್ತಿತಗೊಂಡಿರುತ್ತದೆ. ಅದನ್ನು ಸುತ್ತಿಗೆಯಿಂದ ಹೊಡೆದರೂ ಒಡೆದುಕೊಳ್ಳುವುದಿಲ್ಲ. ಇದನ್ನು ಕುಡಿಯಬೇಕೆಂದರೆ ಕುದಿಯುವ ನೀರಿನಲ್ಲಿ ಕಾಯಿಸಬೇಕು ಎಂಬುದನ್ನು ಯೋಧರು ತಿಳಿಸುತ್ತಾರೆ.
ಇನ್ನು ಮೊಟ್ಟೆಯಾದರೆ ಸ್ವಲ್ಪ ಕೈತಪ್ಪಿದರೂ ಒಡೆದುಹೊಗುತ್ತದೆ. ಆದರೆ ಅಲ್ಲಿ ಸುತ್ತಿಗೆ ತೆಗೆದುಕೊಂಡು ಒಡೆದರೂ ಆಗದಂತೆ ಹಿಮಗಡ್ಡೆಯಂತಾಗಿರುತ್ತದೆ. ಇದರೊಂದಿಗೆ ಆಲುಗಡ್ಡೆ ಮತ್ತು ಟೊಮೊಟೊ ಕೂಡ ಗಡ್ಡೆಯಂತಾಗಿರುತ್ತದೆ.
ಮೈನಸ್ 40 ರಿಂದ 70 ಡಿಗ್ರಿಯಷ್ಟಿರುವ ತಾಪಮಾನದಲ್ಲಿ ಕುಡಿಯುವ ನೀರು ಕೂಡ ಗಡ್ಡೆಯಂತಾಗಿ ಬದಲಾಗುವ ಸಿಯಾಚಿನ್ನಲ್ಲಿ ಬದುಕಿರುವುದೇ ದೊಡ್ಡ ಸಾಹಸ. ತಾವು ದಿನನಿತ್ಯ ಪಡುವ ಕಷ್ಟವನ್ನು ಯೋಧರು ವಿಡಿಯೋ ಮಾಡಿದ್ದು, ವೈರಲ್ ಆಗಿರುವ ವಿಡಿಯೋ ನೋಡಿ ಜನರು ಯೋಧರಿಗೆ ಬೆಂಬಲ ಸೂಚಿಸುತ್ತಿದ್ದಾರೆ.