ನವದೆಹಲಿ: ಕೇರಳದ ವಯನಾಡ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ನರ್ಸ್ ರಾಜಮ್ಮ ಅವರನ್ನು ಭೇಟಿಯಾದರು.
ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ರಾಹುಲ್ ಗಾಂಧಿ, ಮೂರು ದಿನಗಳ ವಯಾನಾಡು ಪ್ರವಾಸದಲ್ಲಿದ್ದು, ಇಂದು ಕೊನೇ ದಿನವಾಗಿದೆ. ಈ ಹಿನ್ನಲೆಯಲ್ಲಿ ಅವರು ತಾವು ಜನ್ಮನೀಡಿದ ಸಂದರ್ಭದಲ್ಲಿ ಇದ್ದ ನರ್ಸ್ ಭೇಟಿಯಾಗಿ ಅವರಿಗೊಂದು ಪ್ರೀತಿಯ ಅಪ್ಪುಗೆ ನೀಡಿದ್ದಾರೆ.
49 ವರ್ಷಗಳ ಹಿಂದೆ ರಾಹುಲ್ಗಾಂಧಿ ಅವರು ದೆಹಲಿಯಲ್ಲಿ ಜನಿಸಿದಾಗ ನರ್ಸ್ ರಾಜಮ್ಮ ರಾಜಪ್ಪನ್ ಅವರು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ನಿವೃತ್ತಗೊಂಡಿರುವ ಅವರು ವಯಾನಾಡ್ನಲ್ಲಿ ವಾಸವಾಗಿದ್ದಾರೆ. ಜೂ 19ರಂದು ರಾಹುಲ್ ಗಾಂಧಿ ಹುಟ್ಟಿದ್ದು ಇದೇ 19ಕ್ಕೆ ಅವರಿಗೆ ಸರಿಯಾಗಿ 49 ವರ್ಷ ತುಂಬುತ್ತದೆ. ಈಗ ರಾಜಮ್ಮನವರನ್ನು ಭೇಟಿಯಾದ ಅವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಶುಕ್ರವಾರ ವಯಾನಾಡ್ಗೆ ತೆರಳಿರುವ ರಾಹುಲ್ ಗಾಂಧಿ ಅಲ್ಲಿ ಹಲವು ರೋಡ್ ಶೋಗಳನ್ನು ಹಮ್ಮಿಕೊಂಡಿದ್ದರು. ಶನಿವಾರ ಕಲ್ಪೆಟ್ಟಾದಲ್ಲಿ ರೋಡ್ ಶೋ ನಡೆಸಿದ್ದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಮೋದಿಯವರ ಚುನಾವಣಾ ಪ್ರಚಾರ ಪೂರ್ತಿಯಾಗಿ ಸುಳ್ಳು, ವಿಷಪೂರಿತ ಹಾಗೂ ದ್ವೇಷಭರಿತವಾಗಿತ್ತು ಎಂದಿದ್ದರು.