ಬೆಂಗಳೂರು, ಜೂ.9- ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಸ್ ಪರೀಕ್ಷೆಯ ಸಂದರ್ಶನ ಪ್ರಕ್ರಿಯೆಯನ್ನು ಆರಂಭಿಸುವಂತೆ ಒತ್ತಾಯಿಸಿ ಬಿಜೆಪಿ ಶಾಸಕರಾದ ಸುರೇಶ್ಕುಮಾರ್ ಹಾಗೂ ರವಿಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ನಾಳೆ (ಜೂ.10)ಕೆಪಿಎಸ್ಸಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮಾಜಿ ಸಚಿವರೂ ಆದ ಸುರೇಶ್ಕುಮಾರ್ ಅವರು, ಕೆಪಿಎಸ್ಸಿ-ಕೆಎಎಸ್ ಪರೀಕ್ಷೆಯ ಪ್ರಕ್ರಿಯೆ ಪೂರ್ಣಗೊಳಿಸಲು ಅನುಸರಿಸುತ್ತಿರುವ ವಿಳಂಬ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2015ನೇ ಸಾಲಿನ ಕೆಎಎಸ್ ಪರೀಕ್ಷೆಗಾಗಿ 2017ರ ಮೇ 12 ರಂದು ಅಧಿಸೂಚನೆ ಪ್ರಕಟಿಸಲಾಗಿದೆ. ಆಗಸ್ಟ್ 18 ರಂದು ಪೂರ್ವಭಾವಿ ಪರೀಕ್ಷೆಗಳು ನಡೆದು ಡಿ.22ಕ್ಕೆ ಮುಖ್ಯ ಪರೀಕ್ಷೆಗಳು ಪೂರ್ಣಗೊಂಡಿವೆ. ಆದರೆ ಫಲಿತಾಂಶಗಳು ಆ ವರ್ಷ ಪ್ರಕಟಗೊಳ್ಳಲಿಲ್ಲ.
2018ರ ಆಗಸ್ಟ್ ತಿಂಗಳಿನಲ್ಲಿ ತಾವು ಆಯೋಗದ ಅಧ್ಯಕ್ಷರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಹಾಗೂ ಇತರರೊಡನೆ ಸಮಾಲೋಚನೆ ನಡೆಸಿ ನಿರಂತರ ಪ್ರಯತ್ನ ಮಾಡಿದ್ದೆ. ನವೆಂಬರ್ನಲ್ಲಿ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದೆ. ಅನೇಕ ಬಾರಿ ಭರವಸೆಗಳು ಸಿಕ್ಕವು, ದಿನಾಂಕಗಳು ನಿಗದಿಯಾದವು. ಆದರೆ ಫಲಿತಾಂಶ ಬಂದಿರಲಿಲ್ಲ.
ಸತತ ಪ್ರಯತ್ನದ ಫಲವಾಗಿ 2019ರ ಜ.28ರಂದು ಫಲಿತಾಂಶ ಪ್ರಕಟವಾಗಿದೆ. ಆದರೆ ಮುಂದಿನ ಹಂತದ ಸಂದರ್ಶನಗಳನ್ನು 6 ತಿಂಗಳಾದರೂ ಕರೆದಿಲ್ಲ. ಮೊದಲು ನೀತಿಸಂಹಿತೆಯ ನೆಪವನ್ನು ಹೇಳಲಾಗುತ್ತಿತ್ತು. ಈಗ ಚುನಾವಣೆ ಮುಗಿದು ಫಲಿತಾಂಶವೂ ಪ್ರಕಟಗೊಂಡಿದೆ. ಆದರೂ ಇನ್ನು ಸಂದರ್ಶನದ ವೇಳಾಪಟ್ಟಿ ಪ್ರಕಟಗೊಂಡಿಲ್ಲ. ಇದರಿಂದ ಅಭ್ಯರ್ಥಿಗಳಲ್ಲಿ ಆತಂಕ, ಹತಾಶೆ ಎದುರಾಗಿದೆ.
ಎಲ್ಲಾ ಅಭ್ಯರ್ಥಿ ಜೊತೆಗೂಡಿ ತಾವು ಜೂ.10 ರಂದು ಬೆಳಗ್ಗೆ 10.30ಕ್ಕೆ ಕೆಪಿಎಸ್ಸಿ ಕಟ್ಟಡದ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಸಂದರ್ಶನದ ವೇಳಾಪಟ್ಟಿ ಪ್ರಕಟಿಸಬೇಕು ಮತ್ತು ಪಾರದರ್ಶಕವಾಗಿ ಸಂದರ್ಶನ ನಡೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಶಾಸಕ ರವಿಸುಬ್ರಹ್ಮಣ್ಯ ಅವರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸುರೇಶ್ಕುಮಾರ್ ತಿಳಿಸಿದ್ದಾರೆ.