ನವದೆಹಲಿ/ತಿರುನಂತಪುರಂ, ಜೂ.8- ನೈರುತ್ಯ ಮುಂಗಾರು ಇಂದು ಕೇರಳ ಪ್ರವೇಶಿಸಿದ್ದು, ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಸುರಿಯಲಾರಂಭಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.
ವಾಡಿಕೆಗಿಂತ ಏಳು ದಿನಗಳಕಾಲ ವಿಳಂಬವಾಗಿರುವ ಮುಂಗಾರು ಇಂದು ಕೇರಳ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಕರಾವಳಿ ರಾಜ್ಯಗಳಲ್ಲಿ ಸೇರಿದಂತೆ ದಕ್ಷಿಣಭಾರತದ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ಜೂ. 9 ರಿಂದ 11ರವರೆಗೂ ಕೊಲ್ಲಂ, ಅಳಪುಳಾ, ತಿರುವನಂತಪುರ ಮತ್ತು ಎರ್ನಾಕುಲಂ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಗಂಟೆಗೆ 45ಕಿ.ಮೀ. ವೇಗದಲ್ಲಿ ನೈಋತ್ಯ ಮಾರುತಗಳೊಂದಿಗೆ ಭಾರೀ ವರ್ಷಧಾರೆಯಾಗಲಿದೆ.
ಅಲ್ಲದೆ ತ್ರಿಶೂರ್, ಮಲ್ಪುರಂ, ಕೊಟ್ಯಾಯಂ, ಕೋಳಿಕೋಡ್-ಈ ಜಿಲ್ಲೆಗಳಲ್ಲೂ ಸಹ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ತಿರುವನಂತಪುರಂ ಹವಾಮಾನ ಇಲಾಖೆ ತಿಳಿಸಿದೆ.
ನೈಋತ್ಯ ಅರಬ್ಬಿ ಸಮುದ್ರ ಮತ್ತು ಕೇರಳ ಕರಾವಳಿಯಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡುಬರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಮುಂಗಾರು ಕೇರಳ ಪ್ರವೇಶದ ಹಿನ್ನೆಲೆಯಲ್ಲಿ ರಾಜ್ಯದ ದಕ್ಷಿಣ, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು, ರಾಮನಗರ, ಮೈಸೂರು, ಹಾಸನ ಭಾಗಗಳಲ್ಲಿ ಗುಡುಗು ಸಹಿತ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮಧ್ಯೆ ದೆಹಲಿ, ರಾಜಸ್ತಾನ, ಮಧ್ಯಪ್ರದೇಶ, ವಿದರ್ಭ, ಮತ್ತು ಉತ್ತರ ಪ್ರದೇಶಗಳಲ್ಲಿ ವಾರಾಂತ್ಯದಲ್ಲಿ ತೀವ್ರ ಬಿಸಿಗಾಳಿ ಉಂಟಾಗುವ ಸಾಧ್ಯತೆ ಇದೆ. ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಬಾರಿ ಮುಂಗಾರು ಮಳೆ ವಿಳಂಬವಾಗುವುದರ ಜೊತೆಗೆ ದೇಶಾದ್ಯಂತ ಸಾಧಾರಣ ಪ್ರಮಾಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.