ಬೆಂಗಳೂರು,ಜೂ.8- ಕಾಂಗ್ರೆಸ್ ನಾಯಕರೇ ಬಂದು ಸಚಿವರಾಗಿ ಎಂದರೂ ನಾನು ಒಪ್ಪಿಕೊಳ್ಳುವುದಿಲ್ಲ. ಈಗಾಗಲೇ ಸಾಕಷ್ಟು ಅವಮಾನವಾಗಿದೆ. ಸೂಕ್ತ ಸಮಯದಲ್ಲಿ ಏನು ನಿರ್ಧಾರ ಮಾಡಬೇಕೊ ಅದನ್ನು ನಾವು ಮಾಡುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಬಾರಿ ನಡೆಯುತ್ತಿರುವ ಸಂಪುಟ ವಿಸ್ತರಣೆಯಲ್ಲೂ ತಮಗೆ ಅವಕಾಶ ಸಿಗುತ್ತಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ತಮ್ಮ ಅಸಮಾಧಾನವನ್ನು ಹೊರ ಹಾಕಿರುವ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿರಿಯರು ಎಂಬ ಹೆಸರಿನಲ್ಲಿ 15 ಮಂದಿ ಸಚಿವರಾಗಲು ಸಿದ್ಧರಾಗಿ ನಿಂತುಬಿಡುತ್ತಾರೆ. ಪ್ರತಿ ಬಾರಿಯೂ ಅವರಿಗೆ ಅವಕಾಶಗಳು ಸಿಗುತ್ತವೆ. ಅವರ ನಂತರ ಉಳಿದಿದ್ದು ಸ್ಪೇರ್ ಸ್ಪಾಟ್ರ್ಸ್ಗಳಂತೆ ಅವರಿವರಿಗೆ ಕೊಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮಲಿಂಗಾರೆಡ್ಡಿ ಅವರೊಬ್ಬರ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ.ಬಹಳಷ್ಟು ಮಂದಿ ಪದೇ ಪದೇ ಸಂಪುಟ ಸೇರುತ್ತಾರೆ. ನಮ್ಮಂಥವರ ಸ್ಥಿತಿ ಏನಾಗಬೇಕು.
ಈ ಹಿಂದೆ ಸಂಪುಟ ವಿಸ್ತರಣೆ ವೇಳೆ ನನ್ನನ್ನು ಕರೆದು ಮಾತುಕತೆ ನಡೆಸಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು.ನಾನು ನಿರೀಕ್ಷೆಯಲ್ಲಿದ್ದೆ. ಆದರೆ ನನಗೆ ಅವಕಾಶವನ್ನೇ ಕೊಡದೆ ಅವಮಾನ ಮಾಡಿದರು. ಸಮುದಾಯಕ್ಕೂ ಅವಮಾನವಾಗಿದೆ.
ಪ್ರತಿಬಾರಿಯೂ ತೋಳ ಬಂತು ತೋಳ ಕಥೆ ಹೇಳುತ್ತಿದ್ದಾರೆ. ಅದನ್ನು ಕೇಳಿ ನನಗೂ ಸಾಕಾಗಿದೆ. ಅವಮಾನದಿಂದ ಸಾಕಷ್ಟು ನೊಂದಿದ್ದೇನೆ. ಈಗ ಸಂಪುಟ ಸೇರಲೇಬಾರದು ಎಂಬ ತೀರ್ಮಾನ ಮಾಡಿದ್ದೇನೆ. ಇನ್ನು ಮುಂದೆ ಯಾರ ಮನೆಯ ಬಾಗಿಲಿಗೆ ನಾನು ಹೋಗುವುದಿಲ್ಲ. ಯಾವ ಬೇಡಿಕೆಗಳನ್ನು ಕೇಳುವುದಿಲ್ಲ. ಅವರಾಗೇ ಬಂದು ಸಚಿವರಾಗಿ ಎಂದರೂ ಒಪ್ಪಿಕೊಳ್ಳಬಾರದೆಂಬ ತೀರ್ಮಾನಕ್ಕೆ ಬಂದಿದ್ದೇನೆ.
ರಾಜಕೀಯವಾಗಿ ಸಮಯ ಬಂದಾಗ ಏನು ತೀರ್ಮಾನ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.