ಬಾಹ್ಯಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಸಾಹಸಕ್ಕೆ ಮುಂದಾದ ಭಾರತ

ನವದೆಹಲಿ, ಜೂ.8- ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಮಹತ್ಸಾಧನೆಗಳ ಹಗ್ಗಳಿಕೆ ಹೊಂದಿರುವ ಭಾರತ ಇದೇ ಮೊದಲ ಬಾರಿಗೆ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದೆ.

ಬಾಹ್ಯಾಕಾಶದಲ್ಲಿರುವ ತನ್ನ ಅಂತರಿಕ್ಷ ವ್ಯಾಪ್ತಿ ಮತ್ತು ಉಪಗ್ರಹಗಳಿಗೆ ರಕ್ಷಣೆ ನೀಡಲು ಹಾಗೂ ಭವಿಷ್ಯದಲ್ಲಿ ವೈರಿ ದೇಶಗಳಿಂದ ಎದುರಾಗಬಹುದಾದ ಆತಂಕಗಳನ್ನು ಸಮರ್ಥವಾಗಿ ಎದುರಿಸಲು ದಿಟ್ಟ ಸಾಹಸಕ್ಕೆ ಕೈ ಹಾಕಿದೆ.

ಇದೇ ಪ್ರಪ್ರಥಮ ಸ್ಟಾರ್‍ವಾರ್ಸ್ (ತಾರಾಸಮರ) ಮಾದರಿಯಲ್ಲಿ ಸೌರಮಂಡಲದಲ್ಲಿ ವೈರಿಗಳೊಂದಿಗೆ ಸೆಣೆಸಾಡುವ ಕೃತಕ (ಅಣಕು)ಸಮರಾಭ್ಯಾಸ ನಡೆಸಲು ದೇಶ ಸಜ್ಜಾಗಿದೆ.

ಮುಂದಿನ ತಿಂಗಳು ನಡೆಯುವ ಈ ಯುದ್ಧಾಭ್ಯಾಸಕ್ಕೆ (ಇಂಡಿಯನ್ ಸ್ಪೇಸ್ ಎಕ್ಸರ್‍ಸೈಸ್-ಭಾರತೀಯ ಬಾಹ್ಯಾಕಾಶ ತಾಲೀಮು) ಎಂದು ಹೆಸರಿಡಲಾಗಿದೆ. ಸೇನಾ ಮತ್ತು ವಿಜ್ಞಾನಿಗಳ ಸಮುದಾಯ ಇದರಲ್ಲಿ ಭಾಗವಹಿಸಲಿವೆ.

ಉದ್ದೇಶಗಳು:
ಭಾರತವು ಭವಿಷ್ಯದಲ್ಲಿ ನಿರ್ವಹಿಸಬೇಕಾದ ಮಹತ್ವದ ಸವಾಲುಗಳನ್ನು ಎದುರಿಸುವುದು, ಅಂತರಿಕ್ಷದಲ್ಲಿರುವ ತನ್ನ ಕೋಟ್ಯಂತರ ರೂ.ಗಳ ಮೌಲ್ಯದ ಆಸ್ತಿಗಳನ್ನು ರಕ್ಷಿಸುವ ತನ್ನ ಸಾಮಥ್ರ್ಯಗಳನ್ನು ಸಾಬೀತು ಮಾಡುವುದು ಈ ಬಾಹ್ಯಾಕಾಶ ಸಮರ ತಾಲೀಮಿನ ಮುಖ್ಯ ಉದ್ದೇಶಗಳಾಗಿವೆ.

ಕಳೆದ ಮಾರ್ಚ್‍ನಲ್ಲಿ ಆತಂಕಕಾರಿ ಉಪಗ್ರಹವನ್ನು ಹೊಡೆದುರುಳಿಸುವ ಎ-ಸ್ಯಾಟ್ ಕ್ಷಿಪಣಿ (ಉಪಗ್ರಹ ಧ್ವಂಸಕ) ಕಾರ್ಯಾಚರಣೆಯಲ್ಲಿ ಅತ್ಯಂತ ಯಶಸ್ಸು ಸಾಧಿಸಿ ವಿಶ್ವದ ಗಮನ ಸೆಳೆದಿದ್ದ ಭಾರತ ಈಗ ಬಾಹ್ಯಾಕಾಶ ಸಮರಾಭ್ಯಾಸಕ್ಕೆ ಸಜ್ಜಾಗಿರುವುದು ಮತ್ತೊಂದು ಕುತೂಹಲಕಾರಿ ಸಂಗತಿಯಾಗಿದೆ.

ಭಾರತ ರಕ್ಷಣಾಪಡೆಗಳ ಅತ್ಯುನ್ನಾತಾಧಿಕಾರಿಗಳು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ-ಇಸ್ರೋ ವಿಜ್ಞಾನಿಗಳು ಮತ್ತು ಸಮರ ಕೌಶಲ್ಯ ಪರಿಣಿತರು ಪಾಲ್ಗೊಳ್ಳಲಿದ್ದಾರೆ.

ಟೇಬಲ್ ಟಾಪ್ ವಾರ್ ಗೇಮ್ :
ಇದು ಒಂದು ರೀತಿ ಟೇಬಲ್‍ಟಾಪ್ ವಾರ್ ಗೇಮ್. ಅಂದರೆ ವೀಡಿಯೋ ಗೇಮ್ ಮಾದರಿಯಲ್ಲಿ ಅತ್ಯುನ್ನತ ತಂತ್ರಜ್ಞಾನ ಬಳಸಿ ಯಥಾವತ್ ಸ್ಟಾರ್‍ವಾರ್ಸ್‍ನಂತೆ ಸೌರಮಂಡಲ ಯುದ್ಧದ ಅಣಕು ಕಾರ್ಯಾಚರಣೆ ನಡೆಸಲಾಗುತ್ತದೆ.

ಅಂತರಿಕ್ಷದ ತದ್ರೂಪು ವಿನ್ಯಾಸ ಮತ್ತು ವೈರಿಗಳ ಗಗನ ನೌಕೆಗಳಿಂದ ನಡೆಯಬಹುದಾದ ಆಕ್ರಮಣಗಳ ಕೃತಕ ಸನ್ನಿವೇಶಗಳನ್ನು ಸೃಷ್ಟಿಸಿ ಇಂತಹ ಸಂದರ್ಭಗಳನ್ನು ಯಾವ ರೀತಿ, ಹೇಗೆ ಎದುರಿಸಬಹುದು ಎಂಬ ಬಗ್ಗೆ ಪ್ರಾಯೋಗಿಕ ತಾಲೀಮು ನಡೆಯಲಿದೆ.

ಇದಕ್ಕಾಗಿ ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಭಾರತೀಯ ವಾಯಪಡೆಯ ವಿಶೇಷ ತಂಡಗಳು ಈ ಟೇಬಲ್‍ಟಾಪ್ ವಾರ್ ಗೇಮ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಮೆರಿಕಾ ಸೇರಿದಂತೆ ಬೆರಳೆಣಿಕೆ ರಾಷ್ಟ್ರಗಳು ಮಾತ್ರ ಈ ರೀತಿಯ ಅಂತರಿಕ್ಷ ಸಮರ ತಾಲೀಮು ನಡೆಸುತ್ತಿವೆ.

ಕಳೆದ ಮೂರು ದಿನಗಳ ಹಿಂದಷ್ಟೇ ಚೀನಾ ಏಳು ಉಪಗ್ರಹಗಳೊಂದಿಗೆ ರಾಕೆಟ್‍ನನ್ನು ಅಂತರಿಕ್ಷಕ್ಕೆ ಉಡಾಯಿಸಿದೆ. ಭಾರತದ ಮೇಲೆ ನಿಗಾ ಇಡುವುದು ಉಡ್ಡಯನದ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ನಡೆಯುತ್ತಿರುವ ಭಾರತದ ಪ್ರಪ್ರಥಮ ಜ್ಯೋತಿರ್ಮಂಡಲ ಸಮರಾಭ್ಯಾಸ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಈ ಉದ್ದೇಶಕ್ಕಾಗಿ ಹೊಸ ರಕ್ಷಣಾ ಬಾಹ್ಯಾಕಾಶ ಏಜೆನ್ಸಿಯೊಂದು ರೂಪು ಪಡೆಯುತ್ತಿದೆ. ದೆಹಲಿಯ ರಕ್ಷಣಾ ರಕ್ಷಣಾ ಪ್ರತಿಬಿಂಬ ಸಂಸ್ಕರಣೆ ಮತ್ತು ವಿಶ್ಲೇಷಣೆ ಕೇಂದ್ರ ಹಾಗೂ ಭೋಪಾಲ್‍ನ ರಕ್ಷಣಾ ಉಪಗ್ರಹ ನಿಯಂತ್ರಣ ಕೇಂದ್ರ-ಇವುಗಳನ್ನು ಒಗ್ಗೂಡಿಸಿ ಹೊಸ ಬಾಹ್ಯಾಕಾಶ ಸಮನ್ವಯ ಸಂಸ್ಥೆಗಳನ್ನು ರಚಿಸಲಾಗಿದೆ.

ರಕ್ಷಣಾ ಇಲಾಖೆಯ ಅತ್ಯಂತ ಪ್ರಮುಖ ಘಟಕವಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‍ಡಿಒ) ಉನ್ನತ ತಜ್ಞರು ಕೂಡ ಈ ಮಹತ್ವದ ಸಮರಭ್ಯಾಸಕ್ಕೆ ಸಾಥ್ ನೀಡಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಇಂಡ್‍ಸ್ಪೇಸ್‍ಎಕ್ಸ್ ಈಗ ವಿಶ್ವದ ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ