ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡ್ರೋಣ್ ಮೂಲಕ ರಕ್ತ ರವಾನೆ

ಡೆಹರಾಡೂನ್, ಜೂ. 8- ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕುಗ್ರಾಮದ ಆರೋಗ್ಯ ಕೇಂದ್ರಕ್ಕೆ ಡ್ರೋಣ್ ಮೂಲಕ ರಕ್ತ ರವಾನೆ ಮಾಡಿ ಹೊಸ ದಾಖಲೆಯನ್ನು ಬರೆಯಲಾಗಿದೆ.

ಉತ್ತರಾಖಂಡ್‍ನ ಥೇಹ್ರೀ ಜಿಲ್ಲೆಯಿಂದ 30ಕಿಮೀ. ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ರಕ್ತ ಬೇಕಾಗಿತ್ತು. ಈ ರಕ್ತವನ್ನು ಶೀಘ್ರ ನೀಡದಿದ್ದರೆ ಜೀವಕ್ಕೆ ಅಪಾಯವಾಗುವ ಸಂಭವವಿತ್ತು.

ರಕ್ತವನ್ನೇನೂ ಥೇಹ್ರೀಯ ಸರ್ಕಾರಿ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಬಹುದಿತ್ತು. ಆದರೆ ಆರೋಗ್ಯ ಕೇಂದ್ರ ಕುಗ್ರಾಮದಲ್ಲಿ ಇದ್ದ ಕಾರಣ. ಇಲ್ಲಿಗೆ ಸರಿಯಾದ ರಸ್ತೆಗಳೂ ಇರಲಿಲ್ಲ. ಕಡೆಯ ಪಕ್ಷ ದ್ವಿಚಕ್ರವಾಹನದಲ್ಲಿ ಹೋಗಬೇಕೆಂದರೆ ಗಂಟೆಗಟ್ಟಲೆ ಬೇಕಿತ್ತು.

ಒಂದು ಕಡೆ ರೋಗಿಯನ್ನು ಉಳಿಸಿಕೊಳ್ಳಬೇಕಾದ ಸವಾಲು, ಮತ್ತೊಂದು ಕಡೆ ಪ್ರಾಣ ಹೋಗುವ ಮೊದಲೇ ರಕ್ತವನ್ನು ನೀಡಬೇಕಾದ ಜವಾಬ್ದಾರಿ ವೈದ್ಯರಿಗಿತ್ತು. ಕೂಡಲೇ ಥೇಹ್ರೀಯ ವೈದ್ಯರು ಕಾನ್ಪುರದಲ್ಲಿರುವ ಐಐಟಿ ತಜ್ಞರೊಬ್ಬರನ್ನು ಸಂಪರ್ಕಿಸಿದರು.

ಇಲ್ಲಿ ನಿಖಿಲ್ ಉಪಾಧ್ಯ ಎಂಬುವರು ಸಿಡಿ ಸ್ಪೇಸ್ ರೋಬೋಟಿಕ್ಸ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಆಪತ್ಕಾಲದಲ್ಲಿ ರಕ್ತವನ್ನು ರವಾನೆ ಮಾಡುವುದು ಈ ಸಂಸ್ಥೆಯ ಉದ್ದೇಶ.

ಥೇಹ್ರೀಯ ಜಿಲ್ಲಾ ಸರ್ಜನ್ ಡಾ. ಎಸ್.ಎಸ್.ಪಂಗ್ಟಿ ಮತ್ತು ಜಿಲ್ಲಾಧಿಕಾರಿ ಸಾರಿಕಾ ಅವರು ಡ್ರೋಣ್ ಮೂಲಕ ರಕ್ತ ರವಾನೆ ಮಾಡಲು ತೀರ್ಮಾನಿಸಿದರು.

ಅದರಂತೆ ತಕ್ಷಣವೇ ಡ್ರೋಣ್‍ನಲ್ಲಿ ನಂದಗಾವ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೇವಲ 15ನಿಮಿಷದಲ್ಲಿ ರಕ್ತ ಸರಬರಾಜು ಮಾಡಿದರು.

ಪರಿಣಾಮ ರೋಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಡ್ರೋಣ್ ಮೂಲಕ ರಕ್ತ ರವಾನೆ ಮಾಡಿದ ಮೊಟ್ಟಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಖಂಡ್ ಪಾತ್ರವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ