ಬಾಗಲಕೋಟೆ ; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದಿನಿಂದ ರಾಜ್ಯಾದ್ಯಂತ ಬರ ಅಧ್ಯಯನಕ್ಕೆ ಪ್ರವಾಸ ಹೊರಟಿದ್ದಾರೆ. ಆದರೆ, ಅವರು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ಕ್ಷೇತ್ರವಾದ ಬಾಗಲಕೋಟೆಯಿಂದಲೇ ತಮ್ಮ ಪ್ರವಾಸ ಆರಂಭಿಸಲಿರುವುದು ವಿಶೇಷ.
ಈ ವರ್ಷ ರಾಜ್ಯದಲ್ಲಿ ಇಂದೆಂದೂ ಕಾಣದಂತಹ ಬರದ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರಕ್ಕೆ ಬರವನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ. ಈ ನಡುವೆ ವಿರೋಧ ಪಕ್ಷದ ನಾಯಕನಾಗಿ ಬಿ.ಎಸ್. ಯಡಿಯೂರಪ್ಪನವರೂ ಇಂದಿನಿಂದ ಬರ ಪ್ರವಾಸ ಆರಂಭಿಸಿದ್ದಾರೆ. ಅಲ್ಲದೆ ಮೊದಲು ಬಾದಾಮಿ ತಾಲೂಕಿನ ಮುಷ್ಠಿಗೇರಿ,ಹುನಗುಂದ ತಾಲೂಕಿನ ಗುಡೂರ ಹಾಗೂ ರಕ್ಕಸಗಿ ಗ್ರಾಮಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಮುಷ್ಠಿಗೆರೆಯಿಮದ ಬಿಎಸ್ವೈ ತನ್ನ ಬರ ಅಧ್ಯಯನ ಪ್ರವಾಸವನ್ನು ಆರಂಭಿಸಲಿದ್ದಾರೆ. ಬಳಿಕ ಮಧ್ಯಾಹ್ನ ಬಾದಾಮಿಯಲ್ಲಿ ಬರದ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯನವರ ನಡುವಿನ ರಾಜಕೀಯ ಕಾಳಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ಈ ನಡುವೆ ಹೆಜ್ಜೆ ಹೆಜ್ಜೆಗೂ ಮೈತ್ರಿ ಸರ್ಕಾರದ ವಿರುದ್ಧ ಟೀಕಾಪ್ರಹಾರವನ್ನೇ ನಡೆಸುತ್ತಿರುವ ಬಿಎಸ್ವೈ, ಬರ ಅಧ್ಯಯನ ಪ್ರವಾಸವನ್ನು ಸಿದ್ದರಾಮಯ್ಯ ಅವರ ಕ್ಷೇತ್ರದಿಂದಲೇ ಆರಂಭಿಸಿರುವುದು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ಪ್ರವಾಸದ ವೇಳೆ ಮಾಜಿ ಸಿಎಂ ಬಿಎಸ್ವೈಗೆ ಮಾಜಿ ಶಾಸಕ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಹಾಗೂ ಜಿಲ್ಲಾ ಬಿಜೆಪಿ ಮುಖಂಡರು ಸಾಥ್ ನೀಡಲಿದ್ದಾರೆ.