ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪ್ರತಿಧ್ವನಿಸಿದ ಆಪರೇಷನ್ ಕಮಲದ ಹೇಳಿಕೆ

ಬೆಂಗಳೂರು, ಜೂ.6- ಕೈಗೆ ಬರುತ್ತಿದ್ದ ಅಧಿಕಾರ ನಮ್ಮವರಿಂದಲೇ ನಮ್ಮ ಕೈತಪ್ಪಿತು. ಅನಗತ್ಯವಾಗಿ ನಮ್ಮವರೇ ಮೂಗು ತೂರಿಸಿ ದೋಸ್ತಿಗಳ ನಡುವಿನ ಡ್ಯಾಮೇಜ್ ಕಂಟ್ರೋಲ್ ಆಗುವಂತೆ ಮಾಡಿಬಿಟ್ಟರು. ಇಲ್ಲದಿದ್ದರೆ ಇಷ್ಟೊತ್ತಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುತ್ತಿತ್ತು ಎಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಮುಖಂಡರ ವಿರುದ್ಧ ಹಿರಿಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆ ವಿಚಾರ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾರೀ ಸದ್ದು ಮಾಡಿತು.

ಬಿಜೆಪಿ ನಾಯಕರು ಪದೇ ಪದೇ ಆಪರೇಷನ್ ಕಮಲದ ಹೇಳಿಕೆ ನೀಡಿದ ವಿಷಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರತಿಧ್ವನಿಸಿತು. ಕೈಗೆ ಬರುತ್ತಿದ್ದ ಅಧಿಕಾರವನ್ನು ನಮ್ಮವರಿಂದಲೇ ಕಳೆದುಕೊಳ್ಳಬೇಕಾಯಿತು ಎಂದು ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದರು ಎಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ.

ಬಿಜೆಪಿ ನಾಯಕರು ಹೋದಲ್ಲಿ, ಬಂದಲ್ಲಿ ಸರ್ಕಾರ ಪತನಗೊಳ್ಳುತ್ತದೆ ಎಂದು ಹೇಳಿದ್ದೇ ಬಿಜೆಪಿಗೆ ಹಿನ್ನಡೆಯಾಯಿತು. ಆಪರೇಷನ್ ಕಮಲಕ್ಕೆ ಸಂಬಂಧ ಇಲ್ಲದವರು, ಸರ್ಕಾರ ರಚನೆ ಬಗ್ಗೆ ಮಾಹಿತಿ ಇಲ್ಲದವರೂ ಸರ್ಕಾರ ಪತನಗೊಳ್ಳುತ್ತದೆ ಎಂದು ಮಾತಾಡಿ ಎಡವಟ್ಟಾಗುವಂತಾಯ್ತು ಎಂದು ಹಿರಿಯ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ನಮ್ಮ ಕೆಲವು ಮಾಹಿತಿ ಇಲ್ಲದ ಶಾಸಕರು ಹೋದಲ್ಲಿ ಬಂದಲ್ಲಿ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಾ ಬಂದರು. ಇದರಿಂದಾಗಿ ದೋಸ್ತಿಗಳು ಎಚ್ಚರಿಕೆವಹಿಸಿ ಇನ್ನಷ್ಟು ಗಟ್ಟಿಯಾದರು.ನಮ್ಮವರು ಏನೂ ಗೊತ್ತಿಲ್ಲದೇ ಸುಖಾ ಸುಮ್ಮನೆ ಹೇಳಿಕೆ ಕೊಡದೇ ಇರುತ್ತಿದ್ದರೆ ಇಷ್ಟೊತ್ತಿಗೆ ಸರ್ಕಾರ ಪತನವಾಗಿರುತ್ತಿತ್ತು.

ನಮ್ಮಲ್ಲಿ ಸರ್ಕಾರ ರಚನೆ ಬಗ್ಗೆ ಏನೂ ಮಾಹಿತಿಯೇ ಇಲ್ಲದವರೂ ಮಾತಾಡಿ, ಮಾತಾಡಿ ಎಲ್ಲವೂ ಎಡವಟ್ಟಾಯ್ತು ಎಂದು ರಾಜ್ಯ ಬಿಜೆಪಿಯ ಕೆಲವು ಹಿರಿಯ ನಾಯಕರು ಪಕ್ಷದ ವೇದಿಕೆಯಲ್ಲಿ ಆಂತರಿಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಆಪರೇಷನ್ ಕಮಲ, ಮೈತ್ರಿ ಸರ್ಕಾರ ಪತನದಂತಹ ಹೇಳಿಕೆಯನ್ನು ಯಾವುದೇ ಶಾಸಕರು ನೀಡಬಾರದು, ಸಂಬಂಧಪಟ್ಟವರು ಮಾತ್ರ ಇದರ ಬಗ್ಗೆ ಮಾತನಾಡಬೇಕು ಎಂದು ವರಿಷ್ಠರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದಾಗಿ ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ