ಸರ್ಕಾರಿ ನೌಕರರಿಗೆ ತಿಂಗಳ ನಾಲ್ಕನೇ ಶನಿವಾರವೂ ರಜೆ-ಸಚಿವ ಸಂಪುಟ ಸಭೆ ತಿರ್ಮಾನ

ಬೆಂಗಳೂರು, ಜೂ.6-ಸರ್ಕಾರಿ ನೌಕರರಿಗೆ ಎರಡನೇ ಶನಿವಾರದ ಜೊತೆಗೆ ತಿಂಗಳ ನಾಲ್ಕನೇ ಶನಿವಾರವೂ ರಜೆ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಆರನೇ ವೇತನ ಆಯೋಗದ ಶಿಫಾರಸನ್ನು ಆಧರಿಸಿ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತಿಂಗಳ ನಾಲ್ಕನೇ ಶನಿವಾರ ಸಾರ್ವತ್ರಿಕ ರಜೆಯೆಂದು ಘೋಷಿಸಿದೆ.

ತಿಂಗಳ ನಾಲ್ಕನೇ ಶನಿವಾರ ಬ್ಯಾಂಕ್‍ಗಳಿಗೆ ರಜೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ತನ್ನ ಕಚೇರಿಗಳಿಗೆ ರಜೆ ನೀಡಲು ಮುಂದಾಗಿದೆ. ಜೊತೆಗೆ ಬುದ್ಧ, ಬಸವ, ಕನಕ, ವಾಲ್ಮೀಕಿ, ಮಹಾವೀರ ಜಯಂತಿ, ಕಾರ್ಮಿಕ ದಿನಾಚರಣೆ, ಗುಡ್‍ಫ್ರೈಡೇ, ಮಹಾಲಯ ಅಮಾವಾಸ್ಯೆ, ಈದ್ ಮಿಲಾದ್ ಈ ರಜೆಗಳ ಪೈಕಿ ಕೆಲವನ್ನು ರದ್ದುಗೊಳಿಸಿ ಸಾಂದರ್ಭಿಕ ರಜೆಯನ್ನು 15 ರಿಂದ 10 ದಿನಗಳವರೆಗೆ ಇಳಿಕೆ ಮಾಡಿ ಶಿಫಾರಸ್ಸು ಮಾಡಲಾಗಿತ್ತು. ಆದರೆ ಇದು ವಿವಾದಿತ ನಿರ್ಧಾರವಾಗಿರುವುದರಿಂದ ಏಕಾಏಕಿ ತೀರ್ಮಾನಿಸದೆ ಮತ್ತೊಮ್ಮೆ ಸಚಿವ ಸಂಪುಟದ ಉಪ ಸಮಿತಿಯ ಪುನರ್ ವಿಮರ್ಶೆಗೆ ಕಡತವನ್ನು ವಾಪಸ್ ಕಳುಹಿಸಲಾಗಿದೆ.

ದೀಪಾವಳಿ ಹಬ್ಬದ ನಿಮಿತ್ತ ನೀಡುವ ರಜೆಗಳನ್ನು ಒಂದು ಮತ್ತು ಮೂರನೇ ದಿನ ಬದಲಾಗಿ ಒಂದು ಮತ್ತು ಎರಡನೇ ದಿನ ಕ್ರಮವಾಗಿ ನೀಡಲು ಸರ್ಕಾರ ನಿರ್ಧರಿಸಿದೆ.

ಪ್ರತಿ ತಿಂಗಳ ನಾಲ್ಕನೇ ಶನಿವಾರವನ್ನು ರಜೆ ದಿನ ಎಂದು ಘೋಷಿಸುವುದರಿಂದ ಸರ್ಕಾರಿ ನೌಕರರಿಗೆ ಒಂದು ತಿಂಗಳಿನಲ್ಲಿ ಐದು ದಿನಗಳ ಎರಡು ವಾರಾಂತ್ಯಗಳು ದೊರೆಯಲಿವೆ. ತಮ್ಮ ಖಾಸಗಿ ಹಾಗೂ ಕೌಟುಂಬಿಕ ಕರ್ತವ್ಯಗಳ ನಿರ್ವಹಣೆಗೆ ಅವಕಾಶವಾಗಲಿದೆ. ನಾಲ್ಕನೇ ಶನಿವಾರದ ರಜೆಯು ತೃಪ್ತಿಯ ಮಟ್ಟವನ್ನು ಹೆಚ್ಚಿಸಲಿದೆ. ಇದರಿಂದ ಸರ್ಕಾರಿ ನೌಕರರ ಕಾರ್ಯಕ್ಷಮತೆಯಲ್ಲಿ ಸಾಕಾರತ್ಮಕ ಬದಲಾವಣೆಯಾಗಲಿದೆ ಎಂದು ಸಂಪುಟ ಸಭೆ ಅಭಿಪ್ರಾಯಪಟ್ಟಿದೆ.

ಮಹಾನ್ ನಾಯಕರ ಜಯಂತಿ ದಿನ ರಜೆ ನೀಡುವುದರ ಬದಲು ಅವರ ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆ ನೀಡಲಾಗಿದೆ. ಈಗಾಗಲೇ ಈ ಕಡತಕ್ಕೆ ಮುಖ್ಯಮಂತ್ರಿಗಳ ಅನುಮೋದನೆ ದೊರೆತಿದ್ದು, ಹೆಚ್ಚಿನ ಆರ್ಥಿಕ ಪರಿಣಾಮಗಳಾಗದೆ ಇರುವುದರಿಂದ ನಾಲ್ಕನೇ ಶನಿವಾರದ ರಜೆ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ