ನವದೆಹಲಿ, ಜೂ.5- ಹದಿಮೂರು ಸಿಬ್ಬಂದಿ ಇದ್ದ ಭಾರತೀಯ ವಾಯುಪಡೆಯ ಅಂಟೋನೌ-ಎಎನ್32 ಯುದ್ಧ ವಿಮಾನ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿ ಮೂರು ದಿನಗಳಾದರೂ ಅದರ ಬಗ್ಗೆ ಯಾವುದೇ ಸ್ಪಷ್ಟ ಸುಳಿವು ಲಭಿಸಿಲ್ಲ.
ಕಳೆದ ಮೂರು ದಿನಗಳಿಂದ ಈ ವಿಮಾನವನ್ನು ಪತ್ತೆ ಮಾಡಲು ತೀವ್ರ ಶೋಧ ಮುಂದುವರಿದಿದೆ. ಇಂದು ಈ ಕಾರ್ಯಾಚರಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ನೆರವು ಪಡೆಯಲಾಗಿದೆ.
ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿರುವ ಈ ವಿಮಾನವನ್ನು ಪತ್ತೆಮಾಡಲು ನೌಕಾಪಡೆಯ ಬೇಹುಗಾರಿಕೆ ವಿಮಾನಗಳನ್ನು ಮತ್ತು ಸುಖೋಯ್ ಹಾಗೂ ಸೂಪರ್ ಹಕ್ರ್ಯುಲಸ್ ಹೆಲಿಕಾಪ್ಟರ್‍ಗಳನ್ನು ಸಹ ಬಳಸಲಾಗಿದೆ.
ಎಎನ್32 ವಿಮಾನದಲ್ಲಿದ್ದ ತುರ್ತು ಸಂದೇಶ ರವಾನೆ ವ್ಯವಸ್ಥೆ ಕಳೆದ 14 ವರ್ಷಗಳಿಂದ ಕಾರ್ಯನಿರ್ವಹಿಸದೆ ನಿಷ್ಕ್ರಿಯಗೊಂಡಿದೆ ಎಂಬ ಸಂಗತಿ ಈಗ ಬಯಲಾಗಿದೆ.
ಸೋಮವಾರ ಏಳು ಹಿರಿಯ ಅಧಿಕಾರಿಗಳು ಮತ್ತು ಆರು ವಾಯು ಯೋಧರು ಪ್ರಯಾಣಿಸುತ್ತಿದ್ದ ವಿಮಾನ ಅರುಣಾಚಲ ಪ್ರದೇಶದಲ್ಲಿ ಕಟ್ಟ ಕಡೆಯ ಬಾರಿಗೆ ರೆಡಾರ್ ಸಂಪರ್ಕದಿಂದ ಕಣ್ಮರೆಯಾಗಿತ್ತು. ಆಗಿನಿಂದ ಈ ಯುದ್ಧ ವಿಮಾನದ ಸುಳಿವು ಲಭಿಸಿಲ್ಲ. ಶೋಧ ಮುಂದುವರಿದಿದೆ.