ಶ್ರೀನಗರ, ಜೂ.5- ರಂಜಾನ್ ಪ್ರಾರ್ಥನೆ ನಂತರ ಕಣಿವೆ ರಾಜ್ಯ ಕಾಶ್ಮೀರದ ವಿವಿಧೆಡೆ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ, ಹಿಂಸಾಚಾರ ನಡೆದು ಅನೇಕರು ಗಾಯಗೊಂಡಿದ್ದಾರೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಮತ್ತು ಉತ್ತರ ಕಾಶ್ಮೀರದ ಸೋಪುರ್ ಸೇರಿದಂತೆ ಅನೇಕ ಭಾಗಗಳಲ್ಲಿ ಘರ್ಷಣೆ, ಹಿಂಸಾಚಾರ ನಡೆದ ವರದಿಯಾಗಿವೆ.
ಮಸೀದಿಗಳು ಮತ್ತು ಈದ್ಗಾ ಮೈದಾನದಲ್ಲಿ ಇಂದು ಬೆಳಗ್ಗೆ ಪ್ರಾರ್ಥನೆ ನಡೆದ ನಂತರ ಪ್ರತಿಭಟನಾಕಾರರ ಗುಂಪು ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸಿತು.
ಉದ್ರಿಕ್ತ ಗುಂಪನ್ನು ಚದುರಿಸಲು ಯೋಧರು ಬಲ ಪ್ರಯೋಗ ಮಾಡಿದಾಗ ಘರ್ಷಣೆ ನಡೆಯಿತು. ಈ ಘಟನೆಗಳಲ್ಲಿ ಅನೇಕರು ಗಾಯಗೊಂಡಿದ್ದಾರೆ. ಅಹಿತಕರ ಘಟನೆಗಳು ಮರುಕಳಿಸದಂತೆ ಜಮ್ಮು-ಕಾಶ್ಮೀರದಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.
ಈ ಮಧ್ಯೆ ನೌಶೇರಾದಲ್ಲಿ ಮುಸುಕುಧಾರಿ ಪ್ರತಿಭಟನಾಕಾರರು ಜೈಷ್-ಎ-ಮೊಹಮ್ಮದ್ ನಾಯಕ ಮಸೂದ್ ಅಜರ್ ಮತ್ತು ಇತ್ತೀಚೆಗೆ ಹತನಾದ ಕುಖ್ಯಾತ ಉಗ್ರಗಾಮಿ ಜಾಕಿರ್ ಮುಸಾ ಭಾವಚಿತ್ರಗಳೊಂದಿಗೆ ಪ್ರತಿಭಟನೆ ನಡೆಸಿದರೆಂದು ವರದಿಯಾಗಿದೆ. ಆದರೆ, ಪೊಲೀಸರು ಇದನ್ನು ದೃಢಪಡಿಸಿಲ್ಲ.