ಕೋಲ್ಕತಾ, ಜೂ.5-ಲೋಕಸಭೆ ಚುನಾವಣೆಗೆ ಮುನ್ನ ಮತ್ತು ಫಲಿತಾಂಶದ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ ಭೀಕರ ಘರ್ಷಣೆ ಮತ್ತು ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾದ ಪಶ್ಚಿಮ ಬಂಗಾಳದಲ್ಲಿ ರಕ್ತದೋಕುಳಿ ಮುಂದುವರಿದಿದೆ.
24 ನಾರ್ಥ್ ಪರಗಣ ಜಿಲ್ಲೆಯ ನಿಂಟಾ ಪ್ರದೇಶದಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳು ಸ್ಥಳೀಯ ಟಿಎಂಸಿ ನಾಯಕ ನಿರ್ಮಲ್ ಕುಂಡು ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾದರು. ಗುಂಡೇಟಿನಿಂದ ತೀವ್ರ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ನಿರ್ಮಲ್ ಕುಂಡು ಡಮ್ ಡಮ್ ನಗರಸಭೆಯ ವಾರ್ಡ್ ನಂ. 6ರ ಅಧ್ಯಕ್ಷರೂ ಆಗಿದ್ದರು. ಬಿಜೆಪಿ ಕಾರ್ಯಕರ್ತರೇ ಅವರನ್ನು ಕೊಂದಿದ್ದಾರೆಂದು ಟಿಎಂಸಿ ಆರೋಪಿಸಿದೆ.
ಟಿಎಂಸಿ ಸ್ಥಳೀಯ ನಾಯಕನ ಹತ್ಯೆ ನಂತರ ಈ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.
ಲೋಕಸಭೆ ಚುನಾವಣೆಯ ಎಲ್ಲ ಏಳು ಹಂತಗಳ ಮತದಾನದ ವೇಳೆ ಮತ್ತು ಫಲಿತಾಂಶದ ನಂತರ ಪಶ್ಚಿಮ ಬಂಗಾಳದ ವಿವಿಧೆಡೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ ಮತ್ತು ಹಿಂಸಾಚಾರ ನಡೆದು ಸಾವು-ನೋವುಗಳಿಗೆ ಕಾರಣವಾಗಿತ್ತು. ಕಳೆದ ವಾರ ಬಿಜೆಪಿಯ ಇಬ್ಬರು ನಾಯಕರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು.