ಯಶವಂತಪುರ,ಜೂ.4- ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆ ಹಾಗೂ ಜೀವನಮಟ್ಟ ಸುಧಾರಣೆಗಾಗಿ ಸಕಲ ಸೌಲಭ್ಯಗಳನ್ನು ಒದಗಿಸಲು ವಿಶೇಷ ಒತ್ತು ನೀಡಲಾಗಿದೆ ಎಂದು ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ರಾಮೋಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹೊಸಕೆರೆ, ಮಾರಗೊಂಡನಹಳ್ಳಿ, ರಾಮೋಹಳ್ಳಿ ಕಾಲೋನಿ, ಮಾಳಗೊಂಡನಹಳ್ಳಿ ವಿನಾಯಕನಗರ ಹಾಗೂ ಭೀಮನಕುಪ್ಪೆ ಗ್ರಾಮಗಳಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕೈಗೊಂಡಿರುವ ಕಾಂಕ್ರೀಟ್ ಒಳಚರಂಡಿ ಹಾಗೂ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಐದಾರು ವರ್ಷಗಳಿಂದ ಕ್ಷೇತ್ರದ ಇತಿಹಾಸದಲ್ಲೇ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಪರ್ವ ಕೈಗೊಂಡು ಜನರಿಗೆ ಅನುಕೂಲ ಮಾಡಿಕೊಡಲಾಗಿದೆ.
ನಗರಪ್ರದೇಶ-ಗ್ರಾಮಗಳೆಂದು ತಾರತಮ್ಯ ಮಾಡದೆ ರಸ್ತೆ, ಒಳಚರಂಡಿ , ಹೈಮಾಸ್ ಬೀದಿ ದೀಪ ಅಳವಡಿಕೆ, ಶಾಲಾ ಕಾಲೇಜು, ಆರೋಗ್ಯ ಕೇಂದ್ರ, ಯೋಗ, ಧ್ಯಾನ ಮಂದಿರ ಬಯಲು ವ್ಯಾಯಾಮ ಶಾಲೆ ನಿರ್ಮಾಣ ಅಲ್ಲದೆ ಯಥೇಚ್ಛವಾಗಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸುವ ಮುಖೇನ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ವಾಸಯೋಗ್ಯ ವಾತಾವರಣ ನಿರ್ಮಿಸಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಆಹಾರ ಇಲಾಖೆಯ ಅಧಿಕಾರಿಗಳು ಅರ್ಹ ಕಡು ಬಡವರಿಗೆ ಹತ್ತಾರು ವರ್ಷ ಕಳೆದರೂ ಪಡಿತರ ಚೀಟಿ ವಿತರಿಸಿದೆ ಕಿರುಕುಳ ನೀಡುತ್ತಿದ್ದಾರೆ. ಶಾಸಕರು ಮಧ್ಯಪ್ರವೇಶಿಸಿ ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಇದೇ ವೇಳೆ ಗ್ರಾಮಸ್ಥರು ಮನವಿ ಮಾಡಿಕೊಂಡರು.
ಗ್ರಾಪಂ ಅಧ್ಯಕ್ಷೆ ರೂಪ ವೇಣುಗೋಪಾಲ್, ಜಿಪಂ ಸದಸ್ಯೆ ಲತಾ ಹನುಮಂತೇಗೌಡ, ಪಿಡಿಒ ಮಮತಾ, ಎಇಇ ಬೋರೇಗೌಡ, ಎಇ ನಾರಾಯಣಗೌಡ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಗ್ರಾಮಸ್ಥರು ಇದ್ದರು.