ಬೆಂಗಳೂರು,ಜೂ.4- ಮಾಜಿ ಸಚಿವ ರೋಷನ್ ಬೇಗ್ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮತ್ತೊಬ್ಬ ಹಿರಿಯ ಕಾಂಗ್ರೆಸಿಗ ರಾಮಲಿಂಗಾರೆಡ್ಡಿ ಕೂಡ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದ್ದು, ವಲಸಿಗರಿಗೆ ಮಣೆ ಹಾಕಿದ್ದರಿಂದಲೇ ಕಾಂಗ್ರೆಸ್ಗೆ ದುಸ್ಥಿತಿ ಬಂದೊದಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ರಚನೆಯ ನಂತರ ಮೌನಕ್ಕೆ ಶರಣಾಗಿದ್ದ ರಾಮಲಿಂಗಾರೆಡ್ಡಿ ಅವರು ಇಂದು ಬೆಳಗ್ಗೆ ಇದ್ದಕ್ಕಿದಂತೆ ಸ್ಫೋಟಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕುರಿತು ಏನು ಅರಿವಿಲ್ಲದೆ ಬಂದ ಹೊಸಬರಿಗೆ, ವಲಸಿಗರಿಗೆ ಮಣೆ ಹಾಕಿದ್ದೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಎಡವಿದ್ದಾರೆ ಎಂದು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೆ.ಸಿ.ವೇಣುಗೋಪಾಲ್, ಪರಮೇಶ್ವರ್ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಪಕ್ಷದ ಹಿರಿಯರ ಕಡಗಣನೆ ಹಾಗೂ ಕೆಲವು ಸಚಿವರ ಸಂಘಟನಾ ದೂರದೃಷ್ಟಿಯ ಕೊರತೆಯಿಂದಾಗಿ ಪಕ್ಷವು ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಸುವಂತಾಯಿತು. ಹಿರಿಯರು ನೀಡಿದ ಕೆಲವು ಸಲಹೆಗಳನ್ನು ಪರಿಗಣಿಸದೇ ಇರುವುದು ಪಕ್ಷಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಸರ್ಕಾರವಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಲೋಕಸಭೆ ಚುನಾವಣೆಯಲ್ಲಿ ಉತ್ಸಾಹ ಕಳೆದುಕೊಂಡಿದ್ದರು. ಪ್ರಮುಖ ಸ್ಥಾನದಲ್ಲಿರುವ ಕೆಲವು ಕಾಂಗ್ರೆಸ್ ಸಚಿವರು ಹಾಗೂ ಕಾರ್ಯಕರ್ತರ ನಡುವೆ ಉತ್ತಮ ಬಾಂಧವ್ಯ, ಸಂವಹನ ಇಲ್ಲದಿರುವುದು ಹಾಗೂ ಹಿರಿಯ ಕಾಂಗ್ರೆಸಿಗರ ಕಡಗಣನೆ, ಪಕ್ಷದ ಕಾರ್ಯಕರ್ತರ ನಿರ್ಲಕ್ಷ್ಯ ಸೋಲಿಗೆ ಕಾರಣವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಮುಂದಿನ ಸವಾಲುಗಳನ್ನು ಎದುರಿಸಲು ಪಕ್ಷ ಹಾಗೂ ಸರ್ಕಾರದಲ್ಲಿ ಹಿರಿಯರ ಕಡಗಣನೆಯನ್ನು ಸರಿದೂಗಿಸಬೇಕಿದೆ. ಸರ್ಕಾರದಲ್ಲಿ ಹಿರಿಯರಿಗೆ ಪ್ರಾತಿನಿಧ್ಯ ನೀಡುವಂತಾಗಲು ಕಾಂಗ್ರೆಸ್ ಪಕ್ಷದ ಹಿರಿಯರೆಲ್ಲರೂ ಒಂದೆಡೆ ಸೇರಿ ಸಮಾಲೋಚಿಸಬೇಕಿದೆ. ಜೊತೆಗೆ ಹಿರಿಯರು ಯಾರೂ ಪಕ್ಷ ಬಿಡದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಪ್ರಸ್ತುತ ಪರಿಸ್ಥಿತಿ ಹೀಗೆ ಮುಂದುವರೆದರೆ ಹಿರಿಯ ನಾಯಕರು ಪಕ್ಷದಲ್ಲಿ ಮುಂದುವರೆಯಲು ಕಷ್ಟಸಾಧ್ಯವಾದೀತು ಎಂದು ಎಚ್ಚರಿಸಿದ್ದಾರೆ.
ಪ್ರಮುಖವಾಗಿ ಪಕ್ಷದ ಪರ ಚುನಾವಣಾ ಫಲಿತಾಂಶದಲ್ಲಿ ಎಡವಿದ ಸಚಿವರಿಗೆ ಪಕ್ಷ ಸಂಘಟನಾ ಜವಾಬ್ದಾರಿ ನೀಡುವುದರ ಜೊತೆಗೆ ಹಿರಿಯರಿಗೆ ಸರ್ಕಾರದಲ್ಲಿ ಸ್ಥಾನಮಾನ ನೀಡಿ ಆಂತರಿಕ ಅಸಮಾಧಾನವನ್ನು ಸರಿಪಡಿಸುವ ಕಾರ್ಯವನ್ನು ಜವಾಬ್ದಾರಿ ಹೊತ್ತ ನಾಯಕರು ಮಾಡಬೇಕಿದೆ ಎಂದಿದ್ದಾರೆ.
ರಾಮಲಿಂಗಾರೆಡ್ಡಿ ಅವರ ಈ ಟ್ವೀಟ್ ರಾಜ್ಯ ರಾಜಕಾರಣದಲ್ಲಿ ಇದೀಗ ಬಿರುಗಾಳಿ ಎಬ್ಬಿಸಿದೆ.
ರೋಷನ್ಬೇಗ್ ಅವರು ಬಹಿರಂಗವಾಗಿ ಕಾಂಗ್ರೆಸ್ ನಾಯಕರು ವಿರುದ್ಧ ಕಿಡಿಕಾರಿದ್ದರು. ಪಕ್ಷ ಬಿಡುವ ಎಚ್ಚರಿಕೆ ನೀಡಿದ್ದರು.ಈಗ ರಾಮಲಿಂಗಾ ರೆಡ್ಡಿ ಹಿರಿಯ ನಾಯಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಮತ್ತು ಸಚಿವ ಸ್ಥಾನ ನೀಡಬೇಕೆಂದು ಹೇಳುವ ಮೂಲಕ ಅತೃಪ್ತರಿಗೆ ಧ್ವನಿಗೂಡಿಸಿದ್ದಾರೆ.
ಕಾಂಗ್ರೆಸ್ನಲ್ಲಿ ಅತ್ಯಂತ ಪ್ರಭಾವಿ ಆಗಿರುವ ರೆಡ್ಡಿ ಅವರ ಈ ಹೇಳಿಕೆಗಳು ಭಾರೀ ಕುತೂಹಲವನ್ನು ಹುಟ್ಟುಹಾಕಿವೆ. ಒಂದೆಡೆ ಕಾಂಗ್ರೆಸ್ ಸಂಪುಟ ಪುನರ್ ರಚನೆಗೆ ಸಿದ್ದರಾಮಯ್ಯನವರು ಅಡ್ಡಿ ಆಗಿರುವುದರಿಂದ ರಾಮಲಿಂಗಾರೆಡ್ಡಿ ರೊಚ್ಚಿಗೆದಿದ್ದಾರೆ ಎನ್ನಲಾಗಿದೆ.
ಕೆ.ಸಿ.ವೇಣುಗೋಪಾಲ್ ಅವರ ವಿರುದ್ಧವೂ ಅವರು ಸಿಟ್ಟಾಗಿದ್ದು, ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿದ್ದಾರೆ.
ಮೊದಲು ಡಾ.ಕೆ.ಸುಧಾಕರ್ ಈ ರೀತಿಯ ಅಸಮಾಧಾನ ಹೊರಹಾಕಿದ್ದರು. ನಂತರ ಬಿ.ಸಿ.ಪಾಟೀಲ್, ರಮೇಶ್ ಜಾರಕಿಹೊಳಿ, ರೋಷನ್ಬೇಗ್ ತಮ್ಮ ಆಕ್ರೋಶವನ್ನು ಹೊರಹಾಕಿದರೆ, ಈಗ ರಾಮಲಿಂಗಾರೆಡ್ಡಿ ಕೂಡ ಅದೇ ಹಾದಿ ತುಳಿದಿದ್ದಾರೆ.