ಅಧಿಕಾರ ಸಿಕ್ಕಾಗ ಹೊಗಳುವುದು, ಇಲ್ಲದಿದ್ದಾಗ ತೆಗೆಳುವುದು ಸರಿಯಿಲ್ಲ-ಶಾಸಕ ಡಾ.ಸುಧಾಕರ್

ಬೆಂಗಳೂರು,ಜೂ.4- ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ನೋವಿನಲ್ಲಿ ನಾನು ಇರುತ್ತೇನೆ ಎಂದು ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಿಂಗಾರೆಡ್ಡಿ ಅವರು ಹಿರಿಯರು. ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ರೋಷನ್‍ಬೇಗ್ ಹಾಗೂ ರೆಡ್ಡಿ ಅವರು ಕಾಂಗ್ರೆಸ್‍ನಲ್ಲಿದ್ದಾಗ ಸಚಿವರಾಗಿದ್ದರು. ಈಗ ಮೈತ್ರಿ ಸರ್ಕಾರ ಇರುವುದರಿಂದ ಅವರಿಗೆ ಅವಕಾಶ ಸಿಕ್ಕಿಲ್ಲ. ಅಧಿಕಾರ ಸಿಕ್ಕಾಗ ಹೊಗಳುವುದು, ಇಲ್ಲದಿದ್ದಾಗ ಬೇರೆ ರೀತಿ ಮಾತನಾಡುವುದು ಸರಿಯಲ್ಲ. ಅವರಿಬ್ಬರು ಬಿಜೆಪಿಗೆ ಹೋಗಲಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ನಿಮ್ಮಷ್ಟೇ ಕುತೂಹಲ ಆ ವಿಚಾರದಲ್ಲಿ ನನಗೂ ಇದೆ ಎಂದರು.

ರಾಜ್ಯ ಸಚಿವ ಸಂಪುಟ ಪುನರ್ ರಚನೆ ಮಾಡುವ ವಿಚಾರ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವಿವೇಚನೆಗೆ ಬಿಟ್ಟಿದ್ದು, ಕಾಂಗ್ರೆಸ್ ನಾಯಕರು ಅವರೊಂದಿಗೆ ಚರ್ಚಿಸಿ ಯಾವ ತೀರ್ಮಾನ ಮಾಡುತ್ತಾರೋ ಕಾದು ನೋಡೋಣ. ಪುನರ್‍ರಚನೆಯಾಗುತ್ತೋ ಇಲ್ಲವೋ ಎಂಬ ಕುತೂಹಲದಲ್ಲಿದ್ದೇನೆ. ನನ್ನ ಸಾಮಥ್ರ್ಯ ಅರಿತು ಯಾವ ಹುದ್ದೆ ನೀಡುವ ನಿರ್ಧಾರ ಮಾಡುತ್ತಾರೋ ಕಾದು ನೋಡಬೇಕು. ಸರ್ಕಾರವನ್ನು ಉಳಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮುಖ್ಯಮಂತ್ರಿಗಳು ಮಾಡಬೇಕು.

ಬಿಜೆಪಿಯವರಿಗೆ 105 ಶಾಸಕರ ಬಲವಿದೆ. ಇನ್ನು 9 ಶಾಸಕರು ಅವರ ಜೊತೆಗೂಡಿದರೆ ಸರ್ಕಾರ ರಚಿಸುವ ಅವಕಾಶ ದೊರೆಯಲಿದೆ. ಪಕ್ಷದಲ್ಲಿ ಎಲ್ಲಿಯವರೆಗೆ ಇರುತ್ತೇನೋ ಅಲ್ಲಿಯವರೆಗೂ ಪಕ್ಷ ನಿಷ್ಠನಾಗಿರುತ್ತೇನೆ ಎಂದು ಹೇಳಿದರು.

ಸಮರ್ಥರಿದ್ದಾರೆ:
ಕಾಂಗ್ರೆಸ್-ಜೆಡಿಎಸ್‍ನ ಸಮನ್ವಯ ಸಮಿತಿಯಲ್ಲಿ ಮೈತ್ರಿ ಸರ್ಕಾರವನ್ನು ಸುಭದ್ರವಾಗಿ ನಡೆಸಿಕೊಂಡು ಹೋಗುವಷ್ಟು ಸಮರ್ಥರು ಇದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ವಿಶ್ವನಾಥ್ ಅವರಿಗೆ ಸಮನ್ವಯ ಸಮಿತಿಯಲ್ಲಿ ಸ್ಥಾನ ನೀಡುವ ಬಗ್ಗೆ ಉಭಯ ಪಕ್ಷಗಳ ವರಿಷ್ಠರು ತೀರ್ಮಾನ ಕೈಗೊಳ್ಳಬೇಕು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‍ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ಪರವಾಗಿ ಪ್ರಚಾರ ಮಾಡಿದ್ದಾರೆ.

ಹೀಗಿದ್ದರೂ ದೇವೇಗೌಡರನ್ನು ತುಮಕೂರು ಖೆಡ್ಡಾಕ್ಕೆ ತಳ್ಳಿ ಸಿದ್ದರಾಮಯ್ಯನವರು ಸೋಲಿಸಿದರು ಎಂಬುದು ಸತ್ಯಕ್ಕೆ ದೂರವಾದ ಆರೋಪ. ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ರಾಜಕೀಯ ಷಡ್ಯಂತರದ ಇಂದಿನ ಪರಿಸ್ಥಿತಿಯಲ್ಲಿ ಅವರು ರಾಜೀನಾಮೆ ಕೊಡಬಾರದಿತ್ತು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ