ಬೆಂಗಳೂರು, ಜೂ.4- ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡರೆ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಪರಿಸರವಾದಿ ಸುರೇಶ್ ಹೆಬ್ಳೀಕರ್ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಷನಲ್ ಎಜುಕೇಷನ್ ಫೌಂಡೇಷನ್ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರವೇಗದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಊಟ, ವಸತಿ ನೀರು ಒದಗಿಸಲು ಯಥೇಚ್ಛವಾಗಿ ಪ್ರಾಕೃತಿಕ ಸಂಪನ್ಮೂಲಗಳನ್ನು ನಾಶಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಲಿದೆ ಎಂದು ಎಚ್ಚರಿಸಿದರು.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಹಾಗೂ ವಾಹನಗಳ ದಟ್ಟಣೆಯಿಂದ ವಿಪರೀತ ವಾಯುಮಾಲಿನ್ಯವಾಗುತ್ತಿದ್ದು, ಹಸಿರಿಗೆ ಮಹತ್ವ ನೀಡದಿದ್ದರೆ ಉಳಿಗಾಲವಿಲ್ಲ ಎಂದರು.
ಮನಸೋ ಇಚ್ಛೆ ಪ್ಲಾಸ್ಟಿಕ್ ಬಳಕೆಯಿಂದ ಮಣ್ಣಿನಲ್ಲಿರುವ ಪೌಷ್ಠಿಕಾಂಶ ಕಡಿಮೆಯಾಗುತ್ತಿದ್ದು, ಇದರ ಬಳಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ರಾಜ್ಯದ 156 ತಾಲ್ಲೂಕುಗಳಲ್ಲಿ ಬರ ತಾಂಡವವಾಡುತ್ತಿದ್ದು, ರೈತರ ರಕ್ಷಣೆಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ರೈತರು ವ್ಯವಸಾಯದ ಮೂಲಕ ಪರಿಸರ ರಕ್ಷಣೆಯ ಗುರುತರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಬಾಲ್ಯದಿಂದಲೇ ಮಕ್ಕಳಿಗೆ ಪರಿಸರ ಕಾಳಜಿ ಬಗ್ಗೆ ತಿಳಿಸಿಕೊಡಬೇಕು ಎಂದು ಸುರೇಶ್ ಹೆಬ್ಳೀಕರ್ ಸಲಹೆ ನೀಡಿದರು.
ನ್ಯಾಷನಲ್ ಎಜುಕೇಷನ್ ಫೌಂಡೇಷನ್ ಕಾರ್ಯದರ್ಶಿ ಲೇಪಾಕ್ಷ, ಹೆಚ್ಚುವರಿ ಕಾರ್ಯದರ್ಶಿ ವೆಂಕಟಪ್ಪ, ಪ್ರಾಂಶುಪಾಲರಾದ ಲಕ್ಷ್ಮೀದೇವಿ, ರಾಣಾ ಪ್ರತಾಪರೆಡ್ಡಿ, ಶೋಭನಾ ಪ್ರಭಾಕರ್, ಅನಿತಾ ವಿನೋದ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.