
ಬೆಂಗಳೂರು, ಜೂ.4- ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸಿ ಶತಾಯ ಗತಾಯ ಸರ್ಕಾರ ರಚಿಸಬೇಕೆಂಬ ಉಮೇದಿನಲ್ಲಿರುವ ಬಿಜೆಪಿ ನಾಳೆ ಮಹತ್ವದ ಪದಾಧಿಕಾರಿಗಳು ಹಾಗೂ ಶಾಸಕಾಂಗ ಸಭೆಯನ್ನು ಕರೆದಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಪದಾಧಿಕಾರಿ ಮತ್ತು ಶಾಸಕಾಂಗ ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸಂಸತ್‍ಗೆ ಆಯ್ಕೆಯಾಗಿರುವ 25 ಮಂದಿ ನೂತನ ಸಂಸದರು ಮತ್ತು ಸಚಿವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ.
ಸಂಸದರು , ಕೇಂದ್ರ ಸಚಿವರು , ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು ತಾಲ್ಲೂಕು ಅಧ್ಯಕ್ಷರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಮಾಜಿ ಸಚಿವರು, ಮಾಜಿ ಶಾಸಕರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ನಾಳೆ ತೆಗೆದುಕೊಳ್ಳಲಿರುವ ತೀರ್ಮಾನದ ಬಗ್ಗೆ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ಪತನವಾಗಲಿದೆ ಎಂಬ ನಿರೀಕ್ಷೆ ಎಲ್ಲರದ್ದಾಗಿತ್ತು. ಆದರೆ ಇದ್ದಕ್ಕಿದ್ದಂತೆ ಯು ಟರ್ನ್ ಹೊಡೆದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಹೊಸ ರಾಗ ತೆಗೆದಿದ್ದಾರೆ.
ನಮ್ಮ ವರಿಷ್ಠರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕಬಾರದು ಎಂಬ ಸೂಚನೆ ಕೊಟ್ಟಿದ್ದಾರೆ. ದೋಸ್ತಿ ಪಕ್ಷಗಳ ಮುಖಂಡರೇ ಹಾದಿ ಬೀದಿಯಲ್ಲಿ ಕಿತ್ತಾಡಿಕೊಂಡು ಸರ್ಕಾರ ಪತನವಾಗುವವರೆಗೂ ನಾವು ಸಹನೆಯಿಂದ ಕಾಯುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವ ಮಾತಿನಲ್ಲಿ ನೂರೆಂಟು ಅನುಮಾನಗಳು ಮೂಡಿವೆ.
ಸರ್ಕಾರದ ವಿರುದ್ಧ ರಣತಂತ್ರ: ನಾಳಿನ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ. ಈವರೆಗೂ ಫೈವ್ ಸ್ಟಾರ್ ಹೊಟೇಲ್ ಮುಖ್ಯಮಂತ್ರಿ ಎಂಬ ಟೀಕೆಗೆ ಒಳಗಾಗಿದ್ದ ಸಿಎಂ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯಮಾಡಲು ಮುಂದಾಗಿರುವುದಕ್ಕೆ ಬಿಜೆಪಿ ಈಗಾಗಲೇ ತನ್ನ ವಿರೋಧವನ್ನು ಹೊರ ಹಾಕಿದೆ.
ರಾಜ್ಯದಲ್ಲಿ ಈ ಬಾರಿ ಮಳೆಗಾಲ ಆರಂಭವಾಗಿದ್ದರೂ ಕೆಲವು ಕಡೆ ಇನ್ನು ಮುಂಗಾರು ಆಗಮನ ವಿಳಂಬವಾಗಿರುವುದರಿಂದ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ.
ಹೀಗಾಗಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸುವುದು ಹಾಗೂ ಯಡಿಯೂರಪ್ಪನವರು ರಾಜ್ಯ ಪ್ರವಾಸವನ್ನು ಕೈಗೊಳ್ಳುವ ಸಂಭವವಿದೆ.
ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಸರ್ಕಾರ ಹೆಚ್ಚು ದಿನ ಮುಂದುವರೆಯುವ ಸಾಧ್ಯತೆ ಇಲ್ಲ ಎಂಬುದನ್ನು ಮನಗಂಡಿರುವ ಬಿಜೆಪಿ ನಾಯಕರು ಅನಿರೀಕ್ಷಿತವಾಗಿ ಮಧ್ಯಂತರ ಚುನಾವಣೆ ಬಂದರೆ ಮಾನಸಿಕವಾಗಿ ಎದುರಿಸಲು ಸಿದ್ಧರಾಗುತ್ತಿದ್ದಾರೆ.
ಕೆಲವು ಅತೃಪ್ತ ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇರುವುದರಿಂದ ಕೈಗೊಳ್ಳಬೇಕಾದ ಕಾರ್ಯ ತಂತ್ರಗಳ ಬಗ್ಗೆ ನಾಳೆ ಮಹತ್ವದ ತೀರ್ಮಾನ ಹೊರ ಬೀಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.