ನಮ್ಮ ಸಂಪರ್ಕದಲ್ಲೂ ಬಿಜೆಪಿ ಶಾಸಕರಿದ್ದಾರೆ, ಆದರೆ ನಾವು ಆಪರೇಷನ್ ಹಂತಕ್ಕೆ ಹೋಗಲ್ಲ; ಸಚಿವ ಸಾ.ರಾ.ಮಹೇಶ್​

ಮೈಸೂರು: “ನಾವು ಆಪರೇಷನ್ ಮಾಡಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ. 38/80 ಶಾಸಕರಿರುವ ನಮ್ಮ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಇರುವಾಗ, ಅವರಲ್ಲಿ 104 ಶಾಸಕರು ಇದ್ದಾರೆ. ಅವರಲ್ಲಿ ಭಿನ್ನಾಭಿಪ್ರಾಯ ಇರೋದಿಲ್ವಾ.?” ಎಂದು ಸಚಿವ ಸಾ.ರಾ.ಮಹೇಶ್​ ಆಪರೇಷನ್​ ಕಮಲಕ್ಕೆ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ ಸಾ.ರಾ.ಮಹೇಶ್​, “ನಮ್ಮ ಬಳಿಯೂ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ. ಆದರೆ ನಾವು ಆಪರೇಷನ್​ ಮಾಡುವ ಹಂತಕ್ಕೆ ಹೋಗುವುದಿಲ್ಲ. ಯಾವ ಸಮಯದಲ್ಲಿ ಕ್ಲೈಮಾಕ್ಸ್ ಆಗಬೇಕೋ, ಆಗ ಅದು ಆಗುತ್ತೆ” ಎಂದು ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್​. ವಿಶ್ವನಾಥ್ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಸಾ.ರಾ.ಮಹೇಶ್ ಪ್ರತಿಕ್ರಿಯೆ ನೀಡಿದರು. “ವಿಶ್ವನಾಥ್ ಹಿರಿಯರಿದ್ದಾರೆ, ಅವರು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು. ಅವರು ನಮಗೆ ಮಾರ್ಗದರ್ಶನ ನೀಡಿ ಪಕ್ಷವನ್ನು ಸಂಘಟನೆ ಮಾಡಬೇಕು. ರಾಜಕಾರಣದಲ್ಲಿ ವಿಶ್ವನಾಥ್ ಅವರಿಗೆ ತುಂಬಾ ಅನುಭವ ಇದೆ. ಈಗಾಗಲೇ ಎರಡು ಬಾರಿ ರಾಜೀನಾಮೆ ಕೊಡಲು ಮುಂದಾಗಿದ್ದರು. ಅವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇದೆ. ಆ ಕಾರಣದಿಂದ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಕಷ್ಟವಾಗುತ್ತದೆ. ಈ ಬಗ್ಗೆ ಅನೇಕ ಬಾರಿ ಚರ್ಚೆ ಮಾಡಿದ್ದಾರೆ. ಆದ್ದರಿಂದ ಅವರು ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಅನಿಸುತ್ತದೆ. ನಾಳೆ ಸಂಜೆ ಸಿಎಂ ನೇತೃತ್ವದಲ್ಲಿ ಜೆಡಿಎಸ್ ಶಾಸಕರ ಸಭೆ ಕರೆಯಲಾಗಿದೆ. ನಾವು ಕೂಡ ಅವರನ್ನು ಪಕ್ಷದ ಸಂಘಟನೆ ದೃಷ್ಟಿಯಿಂದ ರಾಜೀನಾಮೆ ಕೊಡದಂತೆ ಮನವೊಲಿಸುತ್ತೇವೆ. ವಿಶ್ವನಾಥ್ ಅವರು ಒಬ್ಬ ಹಿಂದುಳಿದ ನಾಯಕರಾಗಿದ್ದು, ರಾಜೀನಾಮೆ ಕೊಡುವುದು ಬೇಡವೆಂದು ನಾನೇ ಒತ್ತಾಯ ಮಾಡುತ್ತೇನೆ. ಪಕ್ಷಕ್ಕೆ ಒಬ್ಬ ಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಂಡು ಪಕ್ಷ ಸಂಘಟನೆ ಮಾಡುತ್ತೇವೆ” ಎಂದು ಹೇಳಿದರು.

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸಾ.ರಾ. ಮಹೇಶ್​, “ಜನರು ತುಂಬಾ ಬುದ್ದಿವಂತರಿದ್ದಾರೆ. ಸ್ಥಳೀಯ ಚುನಾವಣೆಗಳೇ ಬೇರೆ, ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳೆ ಬೇರೆ. ಈ ಬಗ್ಗೆ ಜನ ತೀರ್ಪು ನೀಡಿದ್ದಾರೆ .ಇದು ಜನ ನೀಡಿರುವ ತೀರ್ಮಾನವಾಗಿದೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಯಾರು ಆಡಳಿತ ನಡೆಸಬೇಕು ಎಂದು ಜನ ತೀರ್ಮಾನ ನೀಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಮುಂದಿನ ಜಿ.ಪಂ, ತಾ.ಪಂ ಚುನಾಚಣೆಯಲ್ಲಿ ಪುನರಾವರ್ತನೆಯಾಗುತ್ತದೆ. ಇದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೊಟ್ಟಂತಹ ಆಡಳಿತದ ಪರಿಣಾಮ” ಎಂದು ಶ್ಲಾಘಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ