ಬೆಂಗಳೂರು, ಜೂ.3-ನಗರದ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಉಪನಗರ ರೈಲು ಯೋಜನೆ (ಸಬ್ ಅರ್ಬನ್)ಗೆವರದಿಯನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವುದಾಗಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರು ಹೇಳಿದ್ದಾರೆ.
ಸಬ್ಅರ್ಬನ್ ರೈಲು ಅನುಷ್ಠಾನವಾದರೆ ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಯಾಗುವ ಸಂಭವವಿದೆ. ಹಾಗಾಗಿ ಶೀಘ್ರದಲ್ಲೇ ಪತ್ರ ಬರೆದು ಯೋಜನೆ ಆರಂಭಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಗೆ ಆಗಮಿಸಿದ ಅವರು, ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾನು ಮೊದಲ ಬಾರಿಗೆ ಕೇಂದ್ರದಲ್ಲಿ ರೈಲ್ವೆ ಸಚಿವನಾಗಿದ್ದಾಗಲೇ ಈ ಯೋಜನೆಯನ್ನು ಆರಂಭಿಸಲು ವಿಶೇಷ ಆಸಕ್ತಿ ವಹಿಸಿದ್ದೆ. ಆದರೆ ನಂತರದ ದಿನಗಳಲ್ಲಿ ಇದು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸಬಾರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್ನಲ್ಲೇ 17.500 ಕೋಟಿ ಹಣವನ್ನು ಮೀಸಲಿಟ್ಟಿತ್ತು.ಯಾವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಯೋಜನೆಯನ್ನು ಪ್ರಾರಂಭಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ತ್ವರಿತವಾಗಿ ಈ ಯೋಜನೆ ಆರಂಭವಾಗಬೇಕೆಂಬುದು ಬಹುತೇಕರ ಒತ್ತಾಸೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕಾರ್ಯೋನ್ಮುಖರಾಗಬೇಕೆಂದು ಸ್ವತಃ ನಾನೇ ಮನವಿ ಮಾಡುತ್ತೇನೆ, ಅಭಿವೃದ್ಧಿ ವಿಷಯದಲ್ಲಿ ಪಕ್ಷ ರಾಜಕಾರಣ ಬೇಡ ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ 3 ಕಡೆ ರಸಗೊಬ್ಬರ ಕಾರ್ಖಾನೆಗಳನ್ನು ಪ್ರಾರಂಭಿಸಬೇಕೆಂಬ ಚಿಂತನೆ ಇದೆ.ಅದರಲ್ಲಿ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮೊದಲ ಕಾರ್ಖಾನೆ ಪ್ರಾರಂಭಿಸಬೇಕೆಂಬ ಗುರಿ ಹೊಂದಲಾಗಿದೆ. ಈ ಸಂಬಂಧ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೂ ಸ್ಥಳ ಗುರುತಿಸುವಂತೆ ಪತ್ರ ಬರೆಯುತ್ತೇನೆ ಎಂದರು.
ರಾಜ್ಯ ಸರ್ಕಾರ ನೀರು ವಿದ್ಯುತ್ ಮತ್ತು ರೈಲು ಸಂಪರ್ಕ ಇರುವ ಕಡೆ ಜಾಗವನ್ನು ನೀಡಿದರೆ, ಕೂಡಲೇ ಕಾರ್ಖಾನೆಗಳನ್ನು ಪ್ರರಂಭಿಸುತ್ತೇವೆ. ಹಿಂದೆ ಅನಂತಕುಮಾರ್ ಸಚಿವರಾಗಿದ್ದ ವೇಳೆ ಮೂರು ಕಡೆ ರಸಗೊಬ್ಬರ ಕಾರ್ಖಾನೆಗಳನ್ನು ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆದಿತ್ತು. ಕಾರಣಾಂತರಗಳಿಂದ ಇದು ಸಾಧ್ಯವಾಗಲಿಲ್ಲ. ಈಗ ನಮ್ಮ ಸರ್ಕಾರ ಕಾಲಮಿತಿಯೊಳಗೆ ಅನುಷ್ಠಾನ ಮಾಡಲು ಬದ್ಧವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶಾಸಕರಾದ ಡಾ.ಅಶ್ವತ್ಥನಾರಾಯಣ, ಮಾಜಿ ಶಾಸಕ ವಿ.ಮುನಿರಾಜು, ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ್, ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್ ಸೇರಿದಂತೆ ಮತ್ತರರು ಉಪಸ್ಥಿತರಿದ್ದರು.