ನವದೆಹಲಿ; ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಂಪುಟದಲ್ಲಿ ನೂತನ ರಕ್ಷಣಾ ಸಚಿವರಾಗಿ ಆಯ್ಕೆಯಾದ ನಂತರ ರಾಜ್ನಾಥ್ ಸಿಂಗ್ ಇಂದು ವಿಶ್ವದ ಅತಿ ಎತ್ತರದ ಸೇನಾ ಶಿಬಿರವಾದ ಸಿಯಾಚಿನ್ಗೆ ಭೇಟಿ ನೀಡಲಿದ್ದಾರೆ. ಅಲ್ಲದೆ ಸೇನಾ ಮುಖ್ಯಸ್ಥರ ಜೊತೆ ದೇಶದ ಗಡಿ ರಕ್ಷಣಾ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ರಾಜ್ನಾಥ್ ಸಿಂಗ್ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರದ ಮೊದಲ ಭೇಟಿ ಇದಾಗಿದೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸಚಿವ ರಾಜ್ನಾಥ್ ಸಿಂಗ್, “ಜಮ್ಮು-ಕಾಶ್ಮೀರಕ್ಕೆ ಭೇಟಿ ನಿಡುವ ಸಲುವಾಗಿ ಇಂದು ದೆಹಲಿಯಿಂದ ಲಡಾಕ್ಗೆ ಹೊರಟಿದ್ದೇನೆ. ಸಿಯಾಚಿನ್ ನಲ್ಲಿರುವ ಸೇನಾ ಶಿಬಿರದ ಸೈನಿಕರ ಜೊತೆಗೆ ಸಂವಾದ ನಡೆಸಲಿದ್ದೇನೆ. ತರುವಾಯ ಶ್ರೀನಗರದಲ್ಲಿ ಸೇನಾ ಮುಖ್ಯಸ್ಥರ ಜೊತೆ ಸಭೆ ನಡೆಸಲಿದ್ದೇನೆ” ಎಂದು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಭೇಟಿಯ ವೇಳೆ ರಾಜ್ನಾಥ್ ಸಿಂಗ್ ದೇಶದ ರಕ್ಷಣಾ ಮುಖ್ಯಸ್ಥರಾದ ಬಿಪಿನ್ ರಾವತ್ ಅವರನ್ನು ಭೇಟಿಯಾಗಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ. ಅಲ್ಲದೆ ಗಡಿ ರಕ್ಷಣೆಗಾಗಿ ವಾಯುಸೇನಾ ಪಡೆಯ ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸಹಕಾರವನ್ನೂ ಸರ್ಕಾರದ ವತಿಯಿಂದ ನೀಡುವ ಕುರಿತು ಅವರು ಚರ್ಚಿಸಲಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ತಿಳಿಸಿದೆ.
ರಾಜ್ನಾಥ್ ಸಿಂಗ್ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಭೂ ದಳ, ವಾಯುದಳ ಹಾಗೂ ನೌಕಾಪಡೆ ಮುಖ್ಯಸ್ಥರ ಜೊತೆ ತಮ್ಮ ಕಚೇರಿಯಲ್ಲೇ ಸಭೆ ನಡೆಸಿದ್ದರು. ಅಲ್ಲದೆ ಈ ಮೂರೂ ಪಡೆಗಳ ಕಾರ್ಯ ವೈಖರಿ ಕುರಿತು ಹಾಗೂ ಮುಂದಿರುವ ಸವಾಲುಗಳ ಕುರಿತು ಮಾಹಿತಿ ಪಡೆದಿದ್ದರು.
ಇದೀಗ ಈ ಸಭೆಯ ಬಳಿಕ ರಾಜ್ನಾಥ್ ಸಿಂಗ್ ವಿಶ್ವದ ಅತ್ಯಂತ ಎತ್ತರದ ಸೇನಾ ಶಿಬಿರವಾದ ಸಿಯಾಚಿನ್ಗೆ ಸೋಮವಾರ ತೆರಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮೊದಲು ಲಡಾಕ್ಗೆ ತೆರಳುವ ಸಚಿವರು ನಂತರ ಅಲ್ಲಿಂದ ಸಿಯಾಚಿನ್ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಜೂನ್ ತಿಂಗಳಲ್ಲಿ ಸಿಯಾಚಿನ್ ಭಾಗದಲ್ಲಿ ಮೈನಸ್ 60 ಡಿಗ್ರಿ ಗಿಂತ ಕಡಿಮೆ ಉಷ್ಣಾಂಶ ಇರುತ್ತದೆ.